ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ನಾಯಕನ ಪ್ರಚೋದನೆ..?

ಹುಬ್ಬಳ್ಳಿ, ಏ.19- ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಮೊನ್ನೆ ನಡೆದ ಹಳೆ ಹುಬ್ಬಳ್ಳಿ ಗಲಭೆಗೆ ಕಾಂಗ್ರೆಸ್ ಮುಖಂಡನ ಪ್ರಚೋದನೆಯೇ ಕಾರಣ ಎಂಬ ಸತ್ಯವೊಂದು ಬಯಲಿಗೆ ಬಂದಿದ್ದು, ಕಾಂಗ್ರೆಸ್ ಮುಖಂಡನ ಅಸಲಿ ಸತ್ಯ ಬಯಲಾಗಿದೆ.

ಪೊಲೀಸ್ ವಾಹನದ ಮೇಲೆ ಹತ್ತಿ ನಿಂತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಗಲಾಟೆಗೆ ಪ್ರಚೋದನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡನ ಪುಂಡಾಟ ವಿಡಿಯೋ ವೈರಲ್ ಆಗಿದೆ. ಸರ್ಕಾರದ ವಾಹನದ ಮೇಲೆ ನಿಂತು ಜನರತ್ತ ಕೈ ಬೀಸುತ್ತಿರುವ ಅಲ್ತಾಫ್ ಹಳ್ಳೂರು, ಗಲಭೆ ಬಳಿಕ ಶಾಂತಿಯ ನಾಟಕವಾಡಿದ. ಆದರೆ, ಅಸಲಿಯತ್ತು ಈಗ ಬೆಳಕಿಗೆ ಬಂದಿದೆ.

ಜನರನ್ನು ಕರೆದು ಪೊಲೀಸ್ ವಾಹನದ ಮೇಲೆ ಹತ್ತಿಸಿಕೊಳ್ಳುತ್ತಿರುವ ಅಲ್ತಾಫ್ ಹಳ್ಳೂರು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ. ಕಿಡಗೇಡಿಗಳಿಗೆ ತಿಳಿ ಹೇಳಬೇಕಿದ್ದ ಮುಖಂಡನೇ ಪ್ರಚೋದನೆ ನೀಡಿದ್ದು, ಪ್ರಚೋದನೆಯಿಂದ ಗಲಭೆಕೋರರ ಪುಂಡಾಟ ಹೆಚ್ಚಾಗಿದೆ.

ನಿನ್ನೆ ಮೌಲ್ವಿ ಪ್ರಚೋದನೆ ನೀಡುವ ವಿಡಿಯೋ ವೈರಲ್ ಆಗಿತ್ತು. ಅದೇ ವಿಡಿಯೋದಲ್ಲಿಯೇ ಕಾಂಗ್ರೆಸ್ ಮುಖಂಡನ ಮುಖವಾಡ ಬಯಲಾಗಿದೆ. ಈಗಾಗಲೇ ತಲೆ ಮರೆಸಿಕೊಂಡ ಮೌಲ್ವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡನ ಮೇಲೆ ಇದುವರೆಗೂ ಏಕೆ ಕ್ರಮ ಕೈಗೊಂಡಿಲ್ಲ? ರಾಜಕೀಯ ಒತ್ತಡದಿಂದ ಕಾಂಗ್ರೆಸ್ ಮುಖಂಡನನ್ನು ಬಂಧಿಸಲು ಪೊಲೀಸರ ಹಿಂದೇಟು ಹಾಕಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.