ಹುಬ್ಬಳ್ಳಿ ಗಲಭೆಯ ಪುಂಡರಿಗೆ ಜಮೀರ್ ದುಡ್ಡು-ಫುಡ್ಡು ನೆರವು : ರೇಣುಕಾಚಾರ್ಯ ಕಿಡಿ

ಬೆಂಗಳೂರು,ಏ.29- ಮಾನ್ಯ ಶಾಸಕರಾದ ಜಮೀರ್ ಅಹಮ್ಮದ್ ಅವರೇ ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸಿದ ಗಲಭೆಕೋರರಿಗೆ ಆರ್ಥಿಕ ನೆರವು ಕೊಡಲು ಮುಂದಾಗಿರುವ ನೀವು ನಾಗರಿಕ ಸಮಾಜಕ್ಕೆ ಏನು ಸಂದೇಶ ಕೊಡಲು ಮುಂದಾಗಿದ್ದೀರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಹಿಂದೆ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೂ ಇದೇ ರೀತಿ ಆರ್ಥಿಕ ನೆರವು ಕೊಟ್ಟಿದ್ದೀರಿ. ಪರಿಣಾಮ ಏನಾಯಿತು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಒಬ್ಬ ಶಂಕಿತ ಆರೋಪಿಯನ್ನು ಪೊಲೀಸರು ಆಧಾರರಹಿತವಾಗಿ ಇಲ್ಲವೇ ಸುಖಾಸುಮ್ಮನೇ ಬಂಧಿಸುವುದಿಲ್ಲ. ಹುಬ್ಬಳ್ಳಿಯಲ್ಲಿ ಹಾಡು ಹಾಗಲೇ ಬೀದಿಯಲ್ಲಿ ನಿಂತು ಬೆಂಕಿ ಹಚ್ಚಲು,ಕಲ್ಲಿ ತೂರಾಟ ನಡೆಸಲು ಕರೆ ಕೊಟ್ಟವರು ರಾಷ್ಟಪೀತ ಮಹಾತ್ಮ ಗಾಂೀಧಿಜಿಯವರ ಅನುಯಾಯಿಗಳೇ ಇಲ್ಲವೇ ಶಾಂತಿಧೂತರೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಕಿ ಹಚ್ಚುವವರು, ಕೊಲೆ ಮಾಡುವವರು, ಸಾರ್ವಜನಿಕರ ಆಸ್ತಿ ಪಾಸ್ತಿ, ಹಾಳು ಮಾಡುವವರು, ಠಾಣೆಗೆ ನುಗ್ಗಿ ಹಚ್ಚುವವರಿಗೆ ಉದಾರವಾಗಿ ನೀವು ಹಣಕಾಸಿನ ನೆರವು ಕೊಟ್ಟಿದ್ದರಿಂದಲೇ ಪ್ರೇರಣೆ ಪಡೆದ ದೇಶದ್ರೋಹಿಗಳೇ ಹುಬ್ಬಳ್ಳಿಯಲ್ಲೂ ಬೆಂಕಿ ಹಚ್ವಲು ಮುಂದಾದರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಬಂಧಿತರಾಗಿರುವವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡ ಮಾಡಿದವರೇ, ಪಾಕಿಸ್ತಾನ ವಿರುದ್ದ ಗಡಿಯಲ್ಲಿ ನಿಂತು ಶತ್ರುಗಳ ಮೇಲೆ ತಾಯ್ನಾಡಿಗಾಗಿ ಹೋರಾಡಿ ಜೈಲಿಗೆ ಹೋಗಿದ್ದರೆ? ಯಾವ ಕಾರಣಕ್ಕಾಗಿ ಈ ದೇಶದ್ರೋಹಿಗಳಿಗೆ ಹಣದ ನೆರವು ಕೊಡುತ್ತಿದ್ದೀರಿ ಎಂದು ಜಮೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಕಷ್ಟದಲ್ಲಿದ್ದವರಿಗೆ ಹಣಕಾಸಿನ ನೆರವು ಕೊಟ್ಟರೆ ನಮ್ಮದೇನು ತಕರಾರು ಇಲ್ಲ. ಆದರೆ, ನಾಗರಿಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ , ಆಸ್ಪತ್ರೆ , ಹಿಂದೂ ದೇವಾಲಯಗಳ ಮೇಲೆ ಕಲ್ಲು ತೂರಿ,ಮನೆಗಳ ಮೇಲೆ ಕಲ್ಲು ತೂರಿದವರಿಗೆ ಆರ್ಥಿಕ ನೆರವು ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿದ್ದಾರೆ.

ಈಗಲಾದರೂ ನಿಮ್ಮ ಓಲೈಕೆ ರಾಜಕಾರಣ ನಿಲ್ಲಿಸಿ.ಇನ್ನು ಎಷ್ಟು ದಿನ ಈ ಬೂಟಾಟಿಕೆ ಮಾಡುತ್ತೀರಿ. ನೀವು ಇಂತಹ ದೇಶದ್ರೋಹಿಗಳಿಗೆ ಮತ್ತೆ ಮತ್ತೆ ಬಿರಿಯಾನಿ, ಕಬಾಬ್ ಕೊಡಲು ಮುಂದಾದರೆ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವೇ ಬೇಡ ಎಂದು ಎಚ್ಚರಿಸಿದ್ದಾರೆ.