ಸಿನಿಮಾ ಸ್ಟೈಲಲ್ಲಿ ಅರಣ್ಯ ಅಧಿಕಾರಿಗಳ ಆಪರೇಷನ್, ಕೃಷ್ಣಮೃಗ ಬೇಟೆ ಗ್ಯಾಂಗ್ ಸೆರೆ..!

ಕೊಪ್ಪಳ,ಸೆ.8- ಕೃಷ್ಣ ಮೃಗಗಳನ್ನು ಬೇಟೆಯಾಡಿ ಚರ್ಮ, ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಅರಣ್ಯ ಅಧಿಕಾರಿಗಳ ತಂಡ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಿ, 20 ಕೃಷ್ಣಮೃಗದ ಚರ್ಮ, ಎರಡು ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಯಲ್ಬುರ್ಗಾ ತಾಲ್ಲೂಕಿನ ಹುಣಸೆಹಾಳ ಗ್ರಾಮದ ನಿವಾಸಿಗಳಾದ ತುಗ್ಲೆಪ್ಪ, ಶರಣಪ್ಪ ಚೌಹಾಣ, ಮಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತಪ್ಪ ಕಟ್ಟಿಮನಿ ಬಂಧಿತ ಆರೋಪಿಗಳು.

ಇವರು ಯಲ್ಬುರ್ಗ ಭಾಗದ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅವುಗಳ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.  ಬಂಧಿತರಿಂದ 20 ಕೃಷ್ಣ ಮೃಗ ಚರ್ಮ, 2 ಕೃಷ್ಣ ಮೃಗ ಟ್ರೋಪಿಯುಳ್ಳ ಕೊಂಬು, ಒಂದು ಜಿಂಕೆಮರಿ ಸೇರಿದಂತೆ ದಂಧೆಗೆ ಬಳಸುತ್ತಿದ್ದ ಮೂರು ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ಕೃಷ್ಣಮೃಗದ ಚರ್ಮಕ್ಕೆ 50 ಸಾವಿರ ರೂ.ನಂತೆ ಬೆಂಗಳೂರು ಹಾಗೂ ಮಂಗಳೂರು ಭಾಗದಲ್ಲಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಸಿನಿಮೀಯ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮಾರುವೇಷ ಧರಿಸಿ ಜಿಂಕೆ ಚರ್ಮ ಖರೀದಿಸಲು ಬಂದಿದ್ದೇವೆ ಎಂದು ಹೇಳಿ ಈ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.