ಬೆಂಗಳೂರು, ಫೆ. 2- ಶೀಲ ಶಂಕಿಸಿ ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಗೆ ಡಂಬಲ್ಸ್ ನಿಂದ ಮನಬಂದಂತೆ ಹೊಡೆದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಮೂರ್ತಿ ನಗರದ ಹೊಯ್ಸಳ ಸ್ಟ್ರೀಟ್, 4ನೇ ಕ್ರಾಸ್ ನಿವಾಸಿ ಲಿಯಾ(44) ಕೊಲೆಯಾದ ಮಹಿಳೆ. ಆರೋಪಿ ಪತಿ ಮೊರಿಸ್ ಪರಾರಿಯಾಗಿದ್ದಾನೆ.ಲಿಯಾ ಹಾಗೂ ಮೊರಿಸ್ 18 ವರ್ಷದ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಲಿಯಾ ಗೃಹಿಣಿಯಾಗಿದ್ದು, ಈ ಮೊದಲು ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೊರಿಸ್ ಇತ್ತೀಚೆಗೆ ಕೆಲಸ ತೊರೆದಿದ್ದನು.
ರಾಮಮೂರ್ತಿ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ಮೂರನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಕೆಲ ದಿನಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ಶೀಲ ಶಂಕಿಸಿ ಪತಿ ಗಲಾಟೆ ಮಾಡುತ್ತಿದ್ದನು.
ಎಂದಿನಂತೆ ಇಂದು ಮೂವರು ಮಕ್ಕಳು ಶಾಲೆಗೆ ತೆರಳಿದ್ದಾರೆ. ಬೆಳಗ್ಗೆ 9.30ರ ಸುಮಾರಿನಲ್ಲಿ ಮನೆಯಲ್ಲಿದ್ದ ದಂಪತಿ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಪತಿ ಕೈಗೆ ಸಿಕ್ಕಿದ ಡಂಬಲ್ಸ್ ನಿಂದ ಪತ್ನಿಯ ಮುಖ, ತಲೆ ಇನ್ನಿತರ ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇವರ ಮನೆಯಲ್ಲಿ ಗಲಾಟೆ ನಡೆಯುತ್ತಿರುವುದು ಗಮನಿಸಿ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಪರಿಶೀಲಿಸಿದಾಗ ಮಹಿಳೆ ಕೊಲೆಯಾಗಿರುವುದು ಕಂಡು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
Bengaluru, Murder,