ಮಂಡ್ಯ, ಏ.18- ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯದ ಬಾಬುರಾಯನ ಕೊಪ್ಪಲು ಗ್ರಾಮದ ನಿವಾಸಿ ಸೌಮ್ಯ (32) ಕೊಲೆಯಾದ ನತದೃಷ್ಟೆ.
ಸೌಮ್ಯ ಮತ್ತು ಚಂದ್ರ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಲೇ ಇತ್ತು .ಸೌಮ್ಯ ಶೀಲ ಶಂಕಿಸಿ ಹಲವಾರು ಬಾರಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ರಾತ್ರಿ ಅದೇ ವಿಚಾರಕ್ಕೆ ಜಗಳ ನಡೆದಿದ್ದು, ಆ ವೇಳೆ ಕೋಪದಲ್ಲಿ ಕೈಗೆ ಸಿಕ್ಕಿದ ಕಲ್ಲನ್ನು ತೆಗೆದುಕೊಂಡು ಸೌಮ್ಯ ತಲೆ ಮೇಲೆ ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದು ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆರೋಪಿ ಚಂದ್ರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.