ಬೆಂಗಳೂರು, ನ.2– ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿಯ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯು ಬೆಳೆಯುತ್ತಿದೆ. ಆದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲಾ, ಎಂದು ಕಡ್ಡಿ ಮುರಿದಂತೆ ನಿರಾಕರಣೆ ವ್ಯಕ್ತಪಡಿಸಿದ್ದಾರೆ.
ಸಂಪುಟದಲ್ಲಿ ಮುಜರಾಯಿ ಮತ್ತು ಸಾರಿಗೆ ಇಲಾಖೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ರಾಮಲಿಂಗ ರೆಡ್ಡಿ ಪರವಾಗಿ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಮಲಿಂಗ ರೆಡ್ಡಿ ಫಾರ್ ಸಿಎಂ ಎಂಬ ಪೇಜ್ ತೆಗೆದು ಪ್ರಚಾರ ಮಾಡಲಾರಂಭಿಸಿದರು. ಇದಕ್ಕೆ ಸ್ಪಷ್ಟನೆ ನೀಡಿರುವ ರಾಮಲಿಂಗ ರೆಡ್ಡಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ ಕುರ್ಚಿಯು ಖಾಲಿ ಇಲ್ಲ. ನನ್ನ ಮೇಲೆ ಅಭಿಮಾನ ಇದರೆ ಈ ರೀತಿ ಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೇ ಸ್ಪಷ್ಟನೆ ನೀಡಿರುವ ರಾಮಲಿಂಗ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ರಾಮಲಿಂಗ ರೆಡ್ಡಿ ಫಾರ್ ಸಿಎಂ ಎಂಬ ಪೇಜ್ ಮೂಲಕ ಕೆಲವರು ಸುದ್ದಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.ರಾಜ್ಯದಲ್ಲಿ ಸರ್ಕಾರ ಸದೃಢವಾಗಿದ್ದು, ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇರುವುದಿಲ್ಲ ಮತ್ತು ನಾನು ಅದರ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮೇಲೆ ಮತ್ತು ಪಕ್ಷದ ಮೇಲೆ ಗೌರವವಿದ್ದರೆ, ದಯವಿಟ್ಟು ಈ ರೀತಿಯ ಆಧಾರರಹಿತ ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಷ್ಟೇ ನಮ್ಮ ಗುರಿಯಾಗಿರಬೇಕು. ಪಕ್ಷ ಮತ್ತು ನಾಡಿನ ಜನತೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದರತ್ತ ಮಾತ್ರ ನನ್ನ ಗಮನವಿದೆ ಎಂದಿದ್ದಾರೆ.
ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನನ್ನ ಹಿತೈಷಿಗಳು ಯಾರೂ ಇಂತಹ ಗೊಂದಲಕಾರಿ ಪ್ರಚಾರಕ್ಕೆ ಕಿವಿಗೊಡಬಾರದು ಮತ್ತು ಇದರಲ್ಲಿ ಭಾಗಿಯಾಗಬಾರದು ಎಂದು ಕೋರುತ್ತೇನೆ ಎಂದು ರಾಮಲುಂಗಾರೆಡ್ಡಿ ಬರೆದುಕೊಂಡಿದ್ದಾರೆ.ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.
