ನವದೆಹಲಿ,ಜು.12- ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಸುಮಾರು 40 ಕಡೆ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಆದಾಯ ಮೀರಿದ ಆಸ್ತಿಯನ್ನು ಪತ್ತೆಹಚ್ಚಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 350 ಕೋಟಿ ರೂ. ನಗದು, 18.50 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಲಾಗಿದೆ. ದಾಳಿ ನಡೆಸಲಾದ ಸಂಸ್ಥೆಯ ಹೆಸರನ್ನು ಬಹಿರಂಗ ಪಡಿಸದ ಆದಾಯ ತೆರಿಗೆ ಇಲಾಖೆ, ಕಂಪೆನಿ, ನಿರ್ಮಾಣ ಕಾಮಗಾರಿ, ನಿವೇಶನ ಮತ್ತು ಅಪಾರ್ಟ್‍ಮೆಂಟ್‍ಗಳ ಮಾರಾಟ, ವಾಣಿಜ್ಯ ಸ್ಥಳಗಳ ಭೋಗ್ಯ, ಜನವಸತಿ ಪ್ರದೇಶಗಳ ಬಾಡಿಗೆ, ಶಿಕ್ಷಣ, ವಸತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ.
ಆಭರಣ ಮತ್ತು ನಗದಿನ ಜತೆಗೆ ಭೂ ಮಾಲೀಕತ್ವದ ಕರಾರುಪತ್ರಗಳು, ದಾಸ್ತಾವೇಜುಗಳು ಸೇರಿದಂತೆ ಅನೇಕ ಪುರಾವೆಗಳನ್ನುಪತ್ತೆಹಚ್ಚಲಾಗಿದೆ. ಘೋಷಿತ ಆದಾಯಕ್ಕಿಂತಲೂ ಕಂಪೆನಿ ಪ್ರವರ್ತಕರು ಅಕ ಆದಾಯ ಹೊಂದಿರುವುದು ಹಾಗೂ ವಿವಿಧ ಯೋಜನೆಗಳ ಮೇಲೆ ಬಂಡವಾಳ ಹೂಡಿಕೆ ಮಾಡಿರುವುದು ಕಂಡು ಬಂದಿದೆ.
ಸದ್ಯದ ಮಾಹಿತಿ ಪ್ರಕಾರ ಅಧಿನಕೃತ ಆಸ್ತಿಯ ಮೌಲ್ಯ 400 ಕೋಟಿ ರೂ.ಗೂ ಮೀರಿದೆ. ರಿಯಲ್‍ಎಸ್ಟೇಟ್ ವಹಿವಾಟಿನಿಂದ 90 ಕೋಟಿ ರೂ. ಆದಾಯವನ್ನು ಗುರುತಿಸಲಾಗಿದ್ದು, ನಿರ್ಮಾಣ ಕಾಮಗಾರಿಗಳಿಗೆ 28 ಕೋಟಿ ರೂ. ವೆಚ್ಚ ತೋರಿಸಲಾಗಿದೆ.
ವಹಿವಾಟಿನಲ್ಲಿ ತೆರಿಗೆ ವಂಚನೆ ಮಾಡಿರುವುದು ಖಚಿತವಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ತಿಳಿಸಲಾಗಿದೆ.