ಮುಂಬೈ, ಫೆ.25- ತೆರಿಗೆ ವಂಚನೆ ಆರೋಪದ ಮೇಲೆ ಮುಂಬೈನಲ್ಲಿರುವ ಶಿವಸೇನಾ ಕಾಪೆರ್ರೇಟರ್ ಯಶವಂತ್ ಜಾಧವ್ ಅವರ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಇಂದು ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆಯಿಂದ ಬಿಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷ ಜಾಧವ್ ಮನೆಗೆ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಶೋಧ ನಡೆಸಲಾಗುತ್ತಿದೆ. ಜಾದವ್ ಅವರ ಪತ್ನಿ ಯಾಮಿನಿ ಜಾಧವ್ ಬೈಕುಲ್ಲಾ ಕ್ಷೇತ್ರದಿಂದ ಶಿವಸೇನೆಯ ಶಾಸಕರಾಗಿದ್ದಾರೆ.
ಜಾಧವ್ ಅವರು ಗ್ರೇಟರ್ ಮುಂಬೈನ ಮುನ್ಸಿಪಲ್ ಕಾಪೆಪೋರೇಶನ್‍ನ ಬಹುಪಾಲು ವೆಚ್ಚವನ್ನು ನೋಡುವ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪಾಲಿಕೆಗೆ ಚುನಾವಣೆ ನಡೆಯುವ ವಾರದ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಟೀಕೆಗೆ ಗುರಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಸಚಿವ ಮತ್ತು ಎನ್‍ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಜಾರಿ ಇಲಾಖೆ ಬಂಧಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.
ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೇಂದ್ರ ಏಜೆನ್ಸಿಗಳು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿವೆ ಎಂದು ಶಿವಸೇನೆ ಮತ್ತು ಎನ್‍ಸಿಪಿ ಆರೋಪಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂತಹ ಆರೋಪಗಳನ್ನು ಆಧಾರ ರಹಿತ ಎಂದು ತಳ್ಳಿ ಹಾಕಿದ್ದಾರೆ.
