
ಬೆಂಗಳೂರು,ಜು.14– ಸಿಗಂಧೂರು ಚೌಡೇಶ್ವರಿ ದೇವಸ್ಥಾನವನ್ನು ಸಂಪರ್ಕಿಸುವ ರಾಜ್ಯದ ಉದ್ದನೆಯ ತೂಗು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಮನ್ನು ಆಹ್ವಾನಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆಗಳು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಬಗ್ಗೆ ತಮೊಂದಿಗೆ ಯಾರೂ ಚರ್ಚೆ ಮಾಡಿಲ್ಲ. ನನಗೆ ಹೇಳದೇ ಎಲ್ಲವನ್ನೂ ನಿಗದಿ ಮಾಡಿದ್ದಾರೆ. ಕಾರ್ಯಕ್ರಮದ ಮಾಹಿತಿ ಪಡೆದು ನಾನೇ ಖುದ್ದಾಗಿ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿದ್ದೆ. ಕಾರ್ಯಕ್ರಮವನ್ನು ಮುಂದೂಡುವುದಾಗಿ ಹೇಳಿದ್ದರು. ಆದರೆ ಸ್ಥಳೀಯ ಬಿಜೆಪಿ ನಾಯಕರ ಒತ್ತಡದ ಮೇರೆಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ತಮಗೆ ಆಹ್ವಾನ ನೀಡದೇ ಇರುವ ಕಾರಣಕ್ಕೆ ಪ್ರತಿಭಾಟನಾತಕವಾಗಿ ಕಾರ್ಯಕ್ರಮದಲ್ಲಿ ತಾವೂ ಸೇರಿದಂತೆ ಯಾರೂ ಭಾಗವಹಿಸುತ್ತಿಲ್ಲ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಯಾರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬಹಿಷ್ಕರಿಸುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂಘರ್ಷ ಏರ್ಪಡುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇದನ್ನು ಶುರು ಮಾಡಿದ್ದು ನಾವಲ್ಲ, ಅವರು. ಕರೆಯದೇ ಕಾರ್ಯಕ್ರಮ ಮಾಡಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದು ಆಕ್ಷೇಪಿಸಿದರು. ಬಹಳಷ್ಟು ಯೋಜನೆಗಳಲ್ಲಿ ರಾಜ್ಯಸರ್ಕಾರದ ಪಾಲು ಶೇ.75 ರಷ್ಟಿದೆ. ಆದರೂ ನಾವು ಕೇಂದ್ರ ಸರ್ಕಾರದವರನ್ನು ಆಹ್ವಾನಿಸುತ್ತೇವೆ. ರೈಲ್ವೆ ಇಲಾಖೆಯಲ್ಲಿ ಶೇ.50 ರಷ್ಟು ಯೋಜನಾ ವೆಚ್ಚ ಹಾಗೂ ಭೂಮಿಯನ್ನು ನೀಡುತ್ತೇವೆ. ಅದನ್ನು ರಾಜ್ಯಸರ್ಕಾರದ ಯೋಜನೆಗಳೆಂದು ಬಿಂಬಿಸಿಕೊಳ್ಳುವುದಿಲ್ಲ ಎಂದರು.
ಸಚಿವರ ಆಕ್ಷೇಪ :
ಶರಾವತಿ ಹಿನ್ನೀರಿನಲ್ಲಿ 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ದೇಶದಲ್ಲೇ ಎರಡನೇ ಅತೀ ಉದ್ದದ ತೂಗು ಕೇಬಲ್ ಸೇತುವೆ 2.4 ಕಿ.ಮೀ. ಉದ್ದವಿದ್ದು, ಮಲೆನಾಡು ಭಾಗದ ಜನರ 60 ವರ್ಷಗಳ ಕನಸು ನನಸಾಗಿದೆ. ಬಹುನಿರೀಕ್ಷಿತ ಶರಾವತಿ ತೂಗು ಸೇತುವೆ ಉದ್ಘಾಟನೆಗೆ ತಮನ್ನೂ ಆಹ್ವಾನಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತಮಗೂ ಆಹ್ವಾನ ಇಲ್ಲ ಎಂದು ಹೇಳಿದ್ದಾರೆ. ಸಚಿವರಾದಿಯಾಗಿ ಶಾಸಕರೂ ಕೂಡ ಕಾರ್ಯಕ್ರಮದಿಂದ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
- ಕಾರ್ಕಳದ ಪರಶುರಾಮ ಪ್ರತಿಮೆ ಪೈಬರ್ನಿಂದ ಮಾಡಿದ್ದು ಎಂದು ಅಪಪ್ರಚಾರ ಮಾಡಿದ್ದ ಕಾಂಗ್ರೆಸಿಗರಿಗೆ ಮುಖಭಂಗ..!
- ಸಚಿವರು, ಶಾಸಕರ ಜತೆ ಸುರ್ಜೆವಾಲ ಮತ್ತೆ ಸಭೆ
- ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್ ವಿತರಿಸಿದ ಸಿಎಂ
- ಸಿಗಂದೂರು ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ
- ಸಿಗಂಧೂರಿಗೆ ಸಂಪರ್ಕ ಕಲ್ಪಿಸುವ ದೇಶದ 2ನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ