ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಬೂಮ್ರಾ ಮಿಂಚು
ನವದೆಹಲಿ, ಜೂ.8- ಐಪಿಎಲ್ ತಮ್ಮ ಬೌಲಿಂಗ್ನಿಂದ ಮೋಡಿ ಮಾಡುವಲ್ಲಿ ಎಡವಿದ ಮುಂಬೈ ಇಂಡಿಯನ್ಸ್ ಆಟಗಾರ ಜಸ್ಪ್ರೀತ್ ಬೂಮ್ರಾ ಅವರು ಐಸಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಮಿಂಚು ಹರಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಗಳಿಸಿದ ನಂಬರ್ 1 ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ವಿಶ್ವಟೆಸ್ಟ್ನ ಮೊದಲ ಆವೃತ್ತಿಯಲ್ಲಿ ಭಾರತ ರನ್ನರ್ಅಪ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಜಸ್ಪ್ರೀತ್ ಬೂಮ್ರಾ ಎರಡನೆ ಆವೃತ್ತಿ ಪಂದ್ಯಗಳಲ್ಲೂ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಟೌಡಿ ಸರಣಿಯಿಂದ 2ನೆ ಆವೃತ್ತಿ ಆರಂಭವಾಗಿ ಇದುವರೆಗೂ 138 ಪಂದ್ಯಗಳು ಮುಕ್ತಾಯವಾಗಿದ್ದು ಅತಿ ಹೆಚ್ಚು ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಗಳಲ್ಲಿ ಭಾರತದ ವೇಗಿ ಬೂಮ್ರಾ ಅಗ್ರಸ್ಥಾನಿಯಾಗಿದ್ದಾರೆ.
ವಿಶ್ವ ಟೆಸ್ಟ್ನ ಎರಡನೇ ಆವೃತ್ತಿಯಲ್ಲಿ ಜಸ್ಪ್ರೀತ್ ಬೂಮ್ರಾ ತಾನಾಡಿರುವ 17 ಇನ್ನಿಂಗ್ಸ್ಗಳಲ್ಲಿ 40 ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದರೆ, ಪಾಕಿಸ್ತಾನದ ಶಾಹೀನ್ ಆಫ್ರಿದಿ ( 13 ಇನ್ನಿಂಗ್ಸ್, 37 ವಿಕೆಟ್), ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ( 14 ಇನ್ನಿಂಗ್ಸ್, 33 ವಿಕೆಟ್), ಇಂಗ್ಲೆಂಡ್ನ ಓಲ್ಲಿ ರಾಬಿನ್ಸನ್ ( 15 ಇನ್ನಿಂಗ್ಸ್, 32 ವಿಕೆಟ್), ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (9 ಇನ್ನಿಂಗ್ಸ್, 30 ವಿಕೆಟ್) ಕಬಳಿಸಿದ್ದಾರೆ.
ವಿಶೇಷವೆಂದರೆ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಬೌಲರ್ಗಳೆಲ್ಲರೂ ವೇಗಿಗಳಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5 ನೆ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿರುವ ಜಸ್ಪ್ರೀತ್ ಬೂಮ್ರಾ ಅವರು 50 ವಿಕೆಟ್ಗಳ ಸಾಧನೆ ಮಾಡುವತ್ತ ಗಮನ ಹರಿಸಿದ್ದಾರೆ.