ಬೆಂಗಳೂರು,ಆ.13- ಅಮೃತ ಮಹೋತ್ಸವದ ನಿಮಿತ್ತ ಆ.15ರಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.15 ರಂದು 8.55ಕ್ಕೆ ಮುಖ್ಯಮಂತ್ರಿಗಳು ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು. ಧ್ವಜಾರೋಹಣದ ನಂತರ ಮುಖ್ಯಮಂತ್ರಿಗಳು ತೆರೆದ ಜೀಪ್ನಲ್ಲಿ ಪರೇಡ್ ಪರಿವೀಕ್ಷಣೆ ಹಾಗೂ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ.
ಕೆಎಸ್ಆರ್ಪಿ, ಸಿಆರ್ಪಿಎಫ್, ಬಿಎಸ್ಎಫ್, ಸಿಎಆರ್, ಕೆಎಸ್ಐಎಸ್ಎಫ್, ಟ್ರಾಫಿಕ್ ಪೊಲೀಸರು, ಮಹಿಳಾ ಪೊಲೀಸ್ ಸಿಬ್ಬಂದಿಗಳು, ಹೋಮ್ ಗಾಡ್ರ್ಸ್, ಟ್ರಾಫಿಕ್ ವಾರ್ಡನ್ಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಡಾಗ್ ಸ್ಕ್ವಾಡ್, ಬ್ಯಾಂಡ್ಗಳು ಸೇರಿದಂತೆ 36 ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.
ಶಾಲಾ ಮಕ್ಕಳು ಸೇರಿದಂತೆ 1200 ಮಂದಿ ಪಥ ಸಂಚಲದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತುಷಾರ್ ಗಿರಿನಾಥ್ ಅವರು ವಿವರಣೆ ನೀಡಿದರು.
ಪ್ರತ್ಯೇಕ ಆಸನ ವ್ಯವಸ್ಥೆ:
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಅತಿಗಣ್ಯ, ಗಣ್ಯ ಹಾಗೂ ಇತರೆ ಆಹ್ವಾನಿತರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.ಅತಿಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ಪತ್ರಿಕಾ ಪ್ರತಿನಿಗಳು ಜಿ2 ದ್ವಾರದ ಮೂಲಕ ಪ್ರವೇಶ ಪಡೆದು ನಿಗದಿಪಡಿಸಿದ ಆಸನಗಳಲ್ಲಿ ಆಸೀನರಾಗಬೇಕಾಗಿದೆ.
ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಕಾರಿಗಳು ಹಾಗೂ ಬಿಎಸ್ಎಫ್ ಅಧಿಕಾರಿಗಳು ಜಿ3 ಪ್ರವೇಶ ದ್ವಾರದ ಮೂಲಕ ಮೈದಾನ ಪ್ರವೇಶಿಸಬೇಕಾದರೆ, ಸಾರ್ವಜನಿಕರು ಜಿ4 ಪ್ರವೇಶ ದ್ವಾರದಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚು ಸಾರ್ವಜನಿಕರು ಸಮಾರಂಭ ವೀಕ್ಷಿಸಲು ಅನುಕೂಲವಾಗುವಂತೆ ಈ ಬಾರಿ ವೀಕ್ಷಣಾ ಗ್ಯಾಲರಿಯನ್ನು ವಿಸ್ತರಿಸಲಾಗಿದೆ. ಸಾರ್ವಜನಿಕರು ತಾವು ಕುಳಿತ ಸ್ಥಾನದಿಂದಲೇ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ತಾಲೀಮು:
ಆ.15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳ ತಾಲೀಮು ನಡೆಸಲಾಯಿತು. ಕೆಎಸ್ಆರ್ಪಿ ತುಕಡಿಗಳು, ಸಿವಿಲ್ ಡಿಫೆನ್ಸ್, ಸ್ಕೌಟ್ಸ್ ಅಂಡ್ ಗೈಡ್, ಎನ್ಸಿಸಿ, ಹೋಂ ಗಾಡ್ರ್ಸ್ಗಳು, ಅಗ್ನಿಶಾಮಕ ತಂಡಗಳು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದರು.ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಪರೆಡ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಅಂತಿಮ ತಾಲೀಮು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ತುಷಾರ್ ಗಿರಿನಾಥ್ ಅವರು ಸಾಂಕೇತಿಕವಾಗಿ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.