ಪ್ರತಿಭಟನೆ ವೈಚಾರಿಕವಾಗಿರಲಿ, ಶಾಂತಿ ಕಾಪಾಡಿ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಆ.21-ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ಜಿಲ್ಲೆಯ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರು ಕೂಡ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ಯಾವುದೇ ವಿಚಾರದ ಬಗ್ಗೆ ವೈಚಾರಿಕತೆ ಇದ್ದರೆ ವೈಚಾರಿಕತೆಯಿಂದಲೇ ಪ್ರತಿಪಾದಿಸಬೇಕು, ವಿರೋಧಿಸುವುದಿದ್ದರೆ ವೈಚಾರಿತೆಯಿಂದಲೇ ವಿರೋಧಿಸಬೇಕು ಎಂದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಾರ್ವಕರ್ ಅವರನ್ನು ಶ್ರೇಷ್ಠ ಪುತ್ರ ಎಂದು ಹೇಳಿರುವುದು ಇದೆ. ಸಾರ್ವಕರ್ ಬಗ್ಗೆ ಪರ-ವಿರೋಧ ವಿಚಾರಗಳು ವ್ಯಕ್ತವಾಗಿವೆ. ಹಾಗೆಯೇ ಟಿಪ್ಪು ಸುಲ್ತಾನ್ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿವೆ. ಹೀಗಾಗಿ ವೈಚಾರಿಕ ದೃಷ್ಟಿಕೋನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಬೇಕು ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ ಸೂಕ್ತ ರಕ್ಷಣೆ ಕೊಡಲು ಈಗಾಗಲೇ ಸೂಚನೆ ಕೊಡಲಾಗಿದೆ. ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಎಷ್ಟರಮಟ್ಟಿಗೆ ರಾಜಕೀಕರಣ ಮಾಡುತ್ತಾರೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದರು.

ಈ ವಿಚಾರದ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಮತ್ತೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ಒಂದು ಘಟನೆ ನಡೆದಾಗ ಅದರ ಬಗ್ಗೆ ತನಿಖೆಯಾಗುತ್ತದೆ. ಕಾನೂನುಬದ್ದವಾಗಿ ಕ್ರಮಗಳಾಗುತ್ತವೆ. ಅದೇ ರೀತಿ ಈ ಮೊಟ್ಟೆ ಎಸೆದ ಪ್ರಕರಣ ಕೂಡ ಎಂದು ಹೇಳಿದರು.

ಕಳಸಾ ಮಂಡೂರಿ ಯೋಜನೆ ವಿಚಾರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅರಣ್ಯ ಇಲಾಖೆ ಹಾಗೂ ಸಿಡಬ್ಲುಸಿಯಲ್ಲಿ ಈ ಯೋಜನೆಗೆ ಅನುಮತಿ ನೀಡುವ ಅಂತಿಮ ಹಂತದಲ್ಲಿದೆ. ಈ ಎರಡರಿಂದಲೂ ಅನುಮತಿ ದೊರೆತ ಕೂಡಲೇ ಯೋಜನೆ ಪ್ರಾರಂಭವಾಗಲಿದೆ ಎಂದರು.

ಶಿಗ್ಗಾವಿ ಮತ್ತು ಸವಣೂರಿನಲ್ಲಿ ವಕೀಲರ ಸಂಘಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದ್ದು, ಹೈಕೋರ್ಟ್‍ನ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

Articles You Might Like

Share This Article