ಈದ್ಗಾ ಮೈದಾನ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಬಿಬಿಎಂಪಿ ಸಿದ್ಧತೆ

Social Share

ಬೆಂಗಳೂರು,ಜು.15- ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಅಂತ್ಯ ಹಾಡಲು ಬಿಬಿಎಂಪಿ ಸದ್ದಿಲ್ಲದೆ ಸಿದ್ಧತೆ ನಡೆಸಿದೆ.
ಬಿಬಿಎಂಪಿ ಹಾಗೂ ವಕ್ ಸೇರಿದಂತೆ ಯಾರ ಬಳಿಯೂ ಈದ್ಗಾ ಮೈದಾನದ ಸೂಕ್ತ ದಾಖಲೆ ಇಲ್ಲದಿರುವುದರಿಂದ ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಪರಿಗಣಿಸಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈದ್ಗಾ ಮೈದಾನ ವಿವಾದ ಕುರಿತಂತೆ ಕಂದಾಯ ಇಲಾಖೆಗೆ ಪತ್ರ ಬರೆದಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಿವಾದದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈದ್ಗಾ ಮೈದಾನದ ಸೂಕ್ತ ದಾಖಲೆಗಳು ಬಿಬಿಎಂಪಿ ಬಳಿಯೂ ಇಲ್ಲ ಹಾಗೂ ವಕ್ ಬೋರ್ಡ್ ಸಲ್ಲಿಸಿರುವ ದಾಖಲೆಯಲ್ಲೂ ಸಮರ್ಪಕ ಮಾಹಿತಿ ಇರಲಿಲ್ಲ. ಆದರೆ, 2021ರ ರಾಜ್ಯ ಪತ್ರದಲ್ಲಿ ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಪರಿಗಣಿಸಿರುವುದನ್ನೆ ಮಾನದಂಡವಾಗಿರಿಸಿಕೊಂಡು ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಘೋಷಣೆ ಮಾಡುವ ಸಾಧ್ಯತೆಗಳಿವೆ.

ಈದ್ಗಾ ಮೈದಾನ ಕುರಿತಂತೆ ಹೇಳಿಕೆ ನೀಡಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗರಂ ಆಗಿದ್ದರು. ಮಾತ್ರವಲ್ಲಿ ಆಯುಕ್ತರಿಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದರು.

ಮುಂಬರುವ ದಿನಗಳಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಇಂತಹ ಸಮಯದಲ್ಲಿ ಈದ್ಗಾ ಮೈದಾನದಂತಹ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ರಾಜಕೀಯ ಮುತ್ಸದ್ಧಿಗಳು ನೀಡಿದ್ದ ಸಲಹೆ ಮೇರೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ.

ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಿದ್ದ ಆಯುಕ್ತರು ಒಂದೆರಡು ದಿನಗಳ ನಂತರ ಶಾಸಕ ಜಮೀರ್ ಆಹ್ಮದ್‍ಖಾನ್ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಎಂಬುದಕ್ಕೆ ಸೂಕ್ತ ದಾಖಲೆಗಳಿಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದರು.

ಈ ಹೇಳಿಕೆ ನಂತರ ಈದ್ಗಾ ಮೈದಾನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಒಂದು ಕಡೆ ಜಮೀರ್ ಸಮಾನ ಮನಸ್ಕರ ಸಭೆ ಕರೆದು ಈದ್ಗಾ ಮೈದಾನವನ್ನು ಮಕ್ಕಳ ಆಟದ ಮೈದಾನವಾಗಿಯೇ ಉಳಿಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಸ್ಥಳೀಯ ಹಿಂದೂ ಮುಖಂಡರು ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಘೋಷಣೆ ಮಾಡುವಂತೆ ಪಟ್ಟು ಹಿಡಿದು ಚಾಮರಾಜಪೇಟೆ ಬಂದ್‍ಗೆ ಕರೆ ನೀಡಿದ್ದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದರು.

ಹೀಗಾಗಿ ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಗೊಳ್ಳಬಾರದು ಎಂಬ ಉದ್ದೇಶದಿಂದ ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಅಸೂಚನೆ ಹೊರಡಿಸಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಬಿಬಿಎಂಪಿ ಮುಂದಾಗಿದೆ ಎಂದು ಮೂಲಗಳು ಈ ಸಂಜೆಗೆ ತಿಳಿಸಿವೆ.

Articles You Might Like

Share This Article