ತೀವ್ರಗೊಂಡ ಈದ್ಗಾ ಮೈದಾನ ವಿವಾದ, ಚಾಮರಾಜಪೇಟೆಯಲ್ಲಿ ಪ್ರತಿಭಟನೆಗೆ ನಿರ್ಬಂಧ

Social Share

ಬೆಂಗಳೂರು, ಆ.8- ಚಾಮರಾಜ ಪೇಟೆಯ ಈದ್ಗಾ ಮೈದಾನವು ಕಂದಾಯ ಇಲಾಖೆ ಆಸ್ತಿ ಎಂದು ಘೋಷಣೆಯಾದರೂ ಅಲ್ಲಿ ಯಾವುದೇ ಪ್ರತಿಭಟನೆ ಮತ್ತು ಸಂಭ್ರಮಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಹೀಗಾಗಿ ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮೂರು ಹೋಯ್ಸಳ ವಾಹನಗಳನ್ನು ಗಸ್ತು ನಿಲ್ಲಿಸಲಾಗಿದೆ. ಅದೇ ರೀತಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಮೈದಾನಕ್ಕೆ ಯಾರು ಬರಬಾರದು ಹಾಗೂ ಮೈದಾನದ ಬಳಿ ಗುಂಪು ಗೂಡಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನ ಹಿಂದೂಗಳಿಗೆ ಸೇರಿದ್ದು ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಮೈದಾನದಲ್ಲಿರುವ ಕೆಲವು ಅವಶೇಷಗಳನ್ನು ಹೊಡೆದು ಹಾಕುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈದ್ಗಾಮೈದಾನ ಕಂದಾಯ ಇಲಾಖೆ ಸ್ವತ್ತು ಆದ ಮೇಲೆ ಈದ್ಗಾ ಗೋಡೆಯನ್ನು ನೆಲಸಮ ಮಾಡಿ ಎಂದು ಕೆಲವು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ಗೋಡೆ ನೆಲಸಮ ಮಾಡಬೇಕು ಹಾಗೂ ಮೈದಾನದಲ್ಲಿ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ಉತ್ಸವಕ್ಕೆ ಬಳಸುವ ಲೇಜರ್ ಲೈಟ್‍ಗಳು ಮಸೀದಿ ಮೇಲೆ ಬಿದ್ದರೆ ಆಗ ಒಂದು ವರ್ಗದವರು ವಿನಾಕಾರಣ ಜಗಳ ತೆಗೆಯುವ ಸಾಧ್ಯತೆ ಇರುವುದರಿಂದ ಗೋಡೆ ತೆರವು ಮಾಡಬೇಕು ಎಂಬುದು ಕೆಲವರ ವಾದವಾಗಿದೆ.

ನೆಲಸಮ ಬೇಡ: ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮೈದಾನ ಹಿಂದೂಗಳ ಪಾಲಾಗಲಿ ಪರವಾಗಿಲ್ಲ. ಆದರೆ, ಮೈದಾನ ದಲ್ಲಿರುವ ಯಾವುದೇ ವಸ್ತುಗಳಿಗೆ ಹಾನಿಯಾಗ ದಂತೆ ನೋಡಿಕೊಳ್ಳಬೇಕು ಎಂದು ಮುಸಲ್ಮಾನ್ ಮುಖಂಡ ಮಹಮ್ಮದ್ ಖಾಲೀದ್ ಮನವಿ ಮಾಡಿಕೊಂಡಿದ್ದಾರೆ.

ಸ್ಕೂಲ್, ಕಾಲೇಜು, ಆಸ್ಪತ್ರೆ, ಮೇಲ್ಸೇತುವೆ, ವಿಶ್ವವಿದ್ಯಾಲಯಗಳನ್ನು ಕಟ್ಟಬೇಕೇ ಹೊರತು ಪುರಾತನ, ಪ್ರಾಚ್ಯ ವಸ್ತುಗಳನ್ನು ನಾಶ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Articles You Might Like

Share This Article