ಬೆಂಗಳೂರು, ಆ.7- ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಎಂದು ಬಿಬಿಎಂಪಿ ಆದೇಶ ಹೊರಡಿಸುತ್ತಿದ್ದಂತೆ ಚಾಮರಾಜಪೇಟೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಚಾಮರಾಜಪೇಟೆಯ ನಾಗರಿಕರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ಇಂದು ಮೈದಾನದ ಬಳಿ ಸಮಾವೇಶಗೊಂಡು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಾಗರಿಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಬೀದಿಬದಿ ವ್ಯಾಪಾರಿಗಳು ಎಲ್ಲರೂ ಇಂದು ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಕೃತಜ್ಞತೆ ಸಲ್ಲಿಸಿದರು. ಬಹಳ ದಿನಗಳಿಂದ ಈ ಮೈದಾನ ಸರ್ಕಾರದ ಆಸ್ತಿಯಾಗಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಇಂತಹ ಒಂದು ದಿಟ್ಟತನದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಹೀಗಾಗಿ ನಾವು ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದು ಒಕ್ಕೂಟದ ಮುಖಂಡ ಎಸ್.ರುಕ್ಮಾಂಗದ, ಪಾಲಿಕೆ ಮಾಜಿ ಸದಸ್ಯ ಬಿ.ವಿ.ಗಣೇಶ್ ಮತ್ತಿತರರು ಹೇಳಿದರು.
ಚಾಮರಾಜಪೇಟೆಯಲ್ಲಿ ಆಟದ ಮೈದಾನವಿಲ್ಲ. ಸರ್ಕಾರ ಇದನ್ನು ಆಟದ ಮೈದಾನವನ್ನಾಗಿ ಪರಿವರ್ತಿಸಿ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅದೇ ರೀತಿ ಇಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕು. ಆ.15ರಂದು ಇಲ್ಲಿ ಧ್ವಜಾರೋಹಣ ನೆರವೇರಿಸುತ್ತೇವೆ. ಇದು ಸಾರ್ವಜನಿಕ ಆಸ್ತಿಯಾಗಿರುವುದರಿಂದ ಇಲ್ಲಿ ಯಾರ ಅಪ್ಪಣೆಯ ಅಗತ್ಯವಿಲ್ಲ. ಎಷ್ಟೇ ವಿರೋಧವಿದ್ದರೂ ಕೂಡ ನಾವು ಧ್ವಜಾರೋಹಣ ನೆರವೇರಿಸಿಯೇ ತೀರುತ್ತೇವೆ ಎಂದು ಒಕ್ಕೂಟದ ಮುಖಂಡರು ಹೇಳಿದರು.
ಕಳೆದ ಎರಡು ತಿಂಗಳ ಹಿಂದೆ ಈದ್ಗಾ ಮೈದಾನದ ವಿವಾದ ಭುಗಿಲೆದ್ದಿತ್ತು. ಈ ಜಾಗ ವಕ್ ಮಂಡಳಿಗೆ ಸೇರಿದ್ದು ಎಂದು ವಕ್ ಮಂಡಳಿಯವರು ಹಕ್ಕು ಮಂಡಿಸಿದ್ದರು. ವಕ್ ಮಂಡಳಿ ಮತ್ತು ಬಿಬಿಎಂಪಿ ನಡುವೆ ತಿಕ್ಕಾಟ ಶುರುವಾಗಿತ್ತು. ಈ ಮೈದಾನದ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಬೇಕೆಂದು ಚಾಮರಾಜಪೇಟೆ ಬಂದ್ ಕೂಡ ನಡೆಸಲಾಗಿತ್ತು.
ಸುಪ್ರೀಂಕೋರ್ಟ್ ಆದೇಶವಿದೆ. ಇದು ವಕ್ ಮಂಡಳಿಯ ಸ್ವತ್ತು ಎಂದು ವಕ್‍ನವರು ಪ್ರತಿಪಾದಿಸಿದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸರ್ಕಾರ ವಕ್‍ಬೋರ್ಡ್‍ನವರಿಗೆ ಸೂಚಿಸಿ ಗಡುವು ವಿಧಿಸಿತ್ತು. ಅದರಂತೆ ಆ.3ಕ್ಕೆ ಗಡುವು ಮುಗಿದಿತ್ತು. ಸೂಕ್ತ ದಾಖಲಾತಿಗಳನ್ನು ವಕ್ ಮಂಡಳಿಯವರು ನೀಡಿರಲಿಲ್ಲ. ಹೀಗಾಗಿ ಈ ಆಸ್ತಿ ಕಂದಾಯ ಇಲಾಖೆಗೆ ಸೇರಿದ್ದು ಎಂದು ನಿನ್ನೆ ಆದೇಶ ನೀಡಲಾಗಿದೆ.
ಆದೇಶ ನೀಡುತ್ತಿದ್ದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಹಾಗೂ ಮೈದಾನಕ್ಕಾಗಿ ಹೋರಾಟ ಮಾಡಿದವರೆಲ್ಲ ಇಂದು ಸಂಭ್ರಮಾಚರಣೆ ಮಾಡಿದರು.
ಅತ್ತ ವಕ್‍ಬೋರ್ಡ್‍ನವರು ನಾವು ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ. ಇದು ವಕ್‍ಗೆ ಸೇರಿದ ಸ್ವತ್ತಾಗಿದ್ದು, ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶದ ಅಗತ್ಯವಿದೆ. ಹಾಗಾಗಿ ಇನ್ನೂ ಕಾಲಾವಕಾಶ ಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. ಈ ಜಾಗ ಸರ್ಕಾರಿ ಸ್ವತ್ತು ಎಂದು ಆದೇಶ ಹೊರಬಿದ್ದಿದ್ದು, ನಾಗರಿಕ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡಪರ ಸಂಘಟನೆಗಳವರು ಧ್ವಜಾರೋಹಣಕ್ಕೆ ಮುಂದಾಗಿದ್ದಾರೆ. ವಕ್ ಮಂಡಳಿಯವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಮೈದಾನಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.