ಬೆಂಗಳೂರು, ಜು.12- ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಮೊದಲಿನಿಂದಲೂ ಯಾವ ಪದ್ಧತಿಯನ್ನು ಅನುಸರಿ ಸಲಾಗುತ್ತಿತ್ತೋ ಅದನ್ನೇ ಮುಂದುವರೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿದಂತೆ ಯಾವುದೇ ಸಂಘಟನೆಗಳು ಗೊಂದಲ ಮೂಡಿಸಿ ಅಶಾಂತಿಯ ವಾತಾವರಣ ಮೂಡಿಸಲು ಪ್ರಯತ್ನಿಸಬಾರದು. ಈದ್ಗಾ ಮೈದಾನದ ಇತಿಹಾಸ, ಅಲ್ಲಿನ ದಾಖಲೆಗಳು, ಈ ಮೈದಾನವನ್ನು ಏನೆಂದು ಕರೆಯಲಾಗುತ್ತಿತ್ತು ಎಂಬೆಲ್ಲಾ ಮಾಹಿತಿ ಜನರಿಗೆ ಗೊತ್ತಿದೆ.
ಅದು ಇದ್ದಂತೆ ಇರಲು ಬಿಡಬೇಕು. ಗೊಂದಲ ಮೂಡಿಸಿ ಜನರ ನೆಮ್ಮದಿ ಕೆಡಿಸಬಾರದು ಎಂದರು. ನೆರೆ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಮುಖ್ಯಮಂತ್ರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಕೊಡಗಿನಲ್ಲಿ ಭಾರೀ ಅನಾಹುತಗಳಾಗಿವೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾಟಾಚಾರಕ್ಕೆ ಸ್ಥಳೀಯ ಜನಪ್ರತಿನಿಗಳು ಒಂದೆರಡು ಕಡೆ ಭೇಟಿ ನೀಡಿದ್ದಾರೆ. ಆದರೆ, ಯಾವುದೇ ನೆರವು ನೀಡಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಬಿಜೆಪಿಗೆ ಕೊಡಗಿನಲ್ಲಿರುವ ಎರಡು ಸ್ಥಾನಗಳನ್ನು ಜನ ಖಾಲಿ ಮಾಡಿಸುತ್ತಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಆ.3ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯ ಅವರ 75 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.