ಬೆಂಗಳೂರು,ಜು.26- ಐಐಟಿ ಧಾರವಾಡದ ಕ್ಯಾಂಪಸ್‍ನಲ್ಲಿ ಅತ್ಯಾಧುನಿಕ ಡ್ರೋಣ್ ಪ್ರಯೋಗಾಲಯ ಸ್ಥಾಪಿಸುವ ಯೋಜನೆ ರೂಪಿಸುತ್ತಿದೆ. ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ ಅಧ್ಯಯನಕ್ಕಾಗಿ ಈ ಪ್ರಯೋಗಾಲಯ ಕಾರ್ಯ ನಿರ್ವಹಿಸಲಿದೆ.
ಕೆಪಿಟಿಸಿಎಲ್ ಸಂಸ್ಥೆಗೆ ಅನುದಾನ ನೀಡಿದ್ದು, ಐಐಟಿ ಕ್ಯಾಂಪಸ್ ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಈ ಅನುದಾನ ಬಳಕೆಯಾಗುತ್ತಿದೆ. ಡ್ರೋಣ್ ತಂತ್ರಜ್ಞಾನ ಅಧ್ಯಯನಕ್ಕೆ ಹಾಗೂ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಈ ಪ್ರಯೋಗಾಲಯ ಸಹಕಾರಿಯಾಗಲಿದೆ.
ಡ್ರೋಣ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಿಗೆ, ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿಯೂ ಬಳಕೆ ಮಾಡಬಹುದಾಗಿದ್ದು, ಡ್ರೋನ್ ನ್ನು ಇನ್ನೂ ಬಳಕೆದಾರರ ಸ್ನೇಹಿಯನ್ನಾಗಿಸುವುದಕ್ಕೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕಾಗಿ ಸಂಶೋಧನೆ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಫೋಟೋಗ್ರಾಫ್‍ಗಳನ್ನು ಕ್ಲಿಕ್ಕಿಸುವುದರಿಂದ ಮೊದಲುಗೊಂಡು, ವಿಡೀಯೋ, ಬಹುಮಹಡಿ ಕಟ್ಟಡದಲ್ಲಿ ಬೆಂಕಿ ನಂದಿಸುವವರೆಗೂ ವಿವಿಧ ಕ್ಷೇತ್ರಗಳಲ್ಲಿ ಡ್ರೋಣ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕೆಲವು ರೈತರು ಕಳೆದ 3 ವರ್ಷಗಳಿಂದ ತಮ್ಮ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಿಕೆಗೂ ಡ್ರೋಣ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಪಾಕೆಟ್ ಡ್ರೋಣ್‍ಗಳನ್ನು ಕೂಡ ಇತ್ತೀಚೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ರೋಣ್ ಯಾವುದೇ ದಿಕ್ಕಿನಲ್ಲಿಯೂ ಹಾರಾಟ ನಡೆಸಬಲ್ಲದು, ಕಿರಿದಾದ ಮತ್ತು ಕಡಿಮೆ ಪ್ರದೇಶಗಳಲ್ಲಿಯೂ ಡ್ರೋಣ್ ಹಾರಾಟ ನಡೆಸುವಂತೆ ಅಭಿವೃದ್ಧಿಪಡಿಸುವ ಅಗತ್ಯವಿದೆ.