ಬಾಂಗ್ಲಾ ವಲಸಿಗರಿಗೆ ಅಕ್ರಮ ಆಧಾರ್ ಮಾಡಿಕೊಡುತ್ತಿದ್ದ ಮೂವರ ಬಂಧನ

Social Share

ಬೆಂಗಳೂರು,ನ.7-ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದಿರುವ ವಲಸಿಗರಿಗೆ ಭಾರತೀಯರಂತೆ ಪೌರತ್ವ ಹೊಂದಲು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಬೆಂಗಳೂರು ಒನ್ನ ಗುತ್ತಿಗೆ ನೌಕರ ಸೇರಿದಂತೆ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಒನ್ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುವ ಪಾದರಾಯನಪುರದ ನಿವಾಸಿ ನೌಷಾದ್ ಪಾಷ(23), ಸೈಬರ್ ಮಾಲೀಕ ಮಾದನಾಯಕನಹಳ್ಳಿಯ ವಿಜಯಕುಮಾರ್ ಸಿಂಗ್(34) ಮತ್ತು ಬಾಂಗ್ಲಾ ದೇಶದ ಪ್ರಜೆ ಜುವೆಲ್ ರಾಣಾ ಅಲಿಯಾಸ್ ಜುವೇಲ್(22) ಬಂಧಿತ ಆರೋಪಿಗಳು.

ಬಂಧಿತರಿಂದ ವೈದ್ಯಾಧಿಕಾರಿಗಳ ಸೀಲು ಮತ್ತು ಸಹಿಗಳಿರುವ 12 ಆಧಾರ್ ಎನ್ರೋಲ್ಮೆಂಟ್ ಫಾರಂಗಳು, 60 ಪಾನ್ಕಾರ್ಡ್ ಫಾರಂಗಳು, ಸಿಪಿಯು, ಪ್ರಿಂಟರ್, 4 ಚೆಕ್ ಬುಕ್ಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ.

ಯಾವುದೇ ಪಾಸ್ಪೆಪೊರ್ಟ್ ವೀಸಾ ಇಲ್ಲದೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತ ದೇಶಕ್ಕೆ ಬಂದು ಮಾದನಾಯಕನಹಳ್ಳಿ ವ್ಯಾಪ್ತಿಯ ಕುದುರುಗೆರೆ ಕಾಲೋನಿ ಬಳಿ ನೆಲೆಸಿ ಭಾರತೀಯರಂತೆ ಪೌರತ್ವ ಹೊಂದಲು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಆಧಾರ್ ಕಾರ್ಡ್ಗಳನ್ನು ಮಾಡಿಸಿಕೊಂಡಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅಲ್ಲಿ ವಾಸವಾಗಿದ್ದ ಬಾಂಗ್ಲಾ ದೇಶದ ಪ್ರಜೆ ಜುವೇಲ್ ರಾಣಾ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿ ಆತನ ಬಳಿ ಇದ್ದ ಆಧಾರ್ ಕಾರ್ಡ್ ಪಡೆದುಕೊಂಡು ಅದನ್ನು ಯಾರು ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ಕೇಳಿದ್ದಾರೆ.

ಆತ ಸಿದ್ದನ ಹೊಸಹಳ್ಳಿ ಬಳಿ ಇರುವ ಒನ್ ಸ್ಟಪ್ ಅಲ್ ಸೆಲ್ಯೂಷನ್ ಎಂಬ ಹೆಸರಿನ ಸೈಬರ್ನಲ್ಲಿ ವಿಜಯಕುಮಾರ್ ಸಿಂಗ್ ಎಂಬುವರಿಂದ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾನೆ. ಮಾದನಾಯಕನಹಳ್ಳಿ ಠಾಣೆ ಸಿಬ್ಬಂದಿ ಚಂದ್ರು ಅವರು ಮಾರುವೇಷದಲ್ಲಿ ಬಾಂಗ್ಲಾದೇಶದ ಪ್ರಜೆಯಂತೆ ವಿಜಯ್ಕುಮಾರ್ ಸಿಂಗ್ನ ಸೈಬರ್ಗೆ ಭೇಟಿ ನೀಡಿ ಆತನೊಂದಿಗೆ ಹಿಂದಿಯಲ್ಲಿ ಮಾತನಾಡಿ, ಆಧಾರ್ಕಾರ್ಡ್ ಮಾಡಿಕೊಡುವಂತೆ ಕೇಳಿದ್ದಾರೆ.

ಆ ವೇಳೆ ಸಿಬ್ಬಂದಿ ಚಂದ್ರು ಅವರ ಫೋಟೋ ಪಡೆದುಕೊಂಡು ತನ್ನ ಸೈಬರ್ನಲ್ಲಿನ ಆಧಾರ್ ಎನ್ರೋಲ್ಮೆಂಟ್ ಫಾರಂಗೆ ಫೋಟೋ ಅಂಟಿಸಿದ್ದಲ್ಲದೆ ತನ್ನ ಬಳಿ ಇದ್ದ ಡಾ.ಪ್ರಕಾಶ್ಕುಮಾರ್ ಹೆಸರಿನ ಸೀಲು ಮತ್ತು ಸಹಿ ಇರುವ ಪೇಪರ್ ಇಟ್ಟು ಕಲರ್ ಜೆರಾಕ್ಸ್ ಮಾಡಿ ಫೋಟೊ ಮೇಲೆ ಸೀಲು ಬರುವಂತೆ ಮಾಡಿಕೊಟ್ಟು ವಿಳಾಸವನ್ನು ಭರ್ತಿ ಮಾಡಿಕೊಂಡು ಬರುವಂತೆ ವಿಜಯಕುಮಾರ್ ಸಿಂಗ್ ತಿಳಿಸಿದ್ದಾನೆ.

ಕಾನೂನು ಬಾಹಿರವಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನಕಲಿ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ ಬಗ್ಗೆ ತನಿಖೆ ಕೈಗೊಂಡು ಆತನನ್ನು ಬಂಸಿದ್ದಾರೆ. ತನಿಖಾ ಕಾಲದಲ್ಲಿ ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಬನಶಂಕರಿ ಬಳಿ ಇರುವ ಶ್ರೀನಿವಾಸನಗರದ ಬೆಂಗಳೂರು ಒನ್ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುವ ನೌಷಾದ್ ಪಾಷನನ್ನು ಬಂಧಿಸಿದ್ದಾರೆ.

ಈ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಇತರೆ ಆರೋಪಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

ಇನ್ಸ್ಪೆಕ್ಟರ್ ಮಂಜುನಾಥ್ ಅವನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ ಕಾನೂನು ಬಾಹಿರವಾಗಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದವರನ್ನು ಪತ್ತೆಹಚ್ಚಿ ಬಂಸುವಲ್ಲಿ ಯಶಸ್ವಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

Articles You Might Like

Share This Article