ಬಿಬಿಎಂಪಿ ಜಾಗದಲ್ಲಿ ಅಕ್ರಮ ಬಡಾವಣೆ : ತಪ್ಪಿತಸ್ಥರ ವಿರುದ್ಧ ಎಫ್ಐಆರ್
ಬೆಂಗಳೂರು,ಫೆ.11- ಬಿಬಿಎಂಪಿಗೆ ಸೇರಿದ ಕೋಟ್ಯಂತರ ರೂ.ಬೆಲೆ ಬಾಳುವ ಐದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದ ಅಕ್ರಮ ಬಡಾವಣೆಯನ್ನು ತೆರವುಗೊಳಿಸಿರುವ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಸಮೀಪ ಇದ್ದ 5.5ಎಕರೆ ಪ್ರದೇಶದಲ್ಲಿ ಬಿಬಿಎಂಪಿ ಬಯೋ ಮಿಥೇನ್ ಘಟಕ ಸ್ಥಾಪಿಸಲು ಕಾದಿರಿಸಿತ್ತು.
ಆದರೆ, ಕೆಲವು ಭೂಗಳ್ಳರು ಬಿಬಿಎಂಪಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ಅಮಾಯಕರಿಗೆ ನಿವೇಶನ ಮಾರಾಟ ಮಾಡಲು ಸಂಚು ರೂಪಿಸಿದ್ದರು. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಘನತ್ಯಾಜ್ಯ ಘಟಕದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತಿತರ ಅಧಿಕಾರಿಗಳು ಅಕ್ರಮ ಬಡಾವಣೆಯನ್ನು ತೆರವುಗೊಳಿಸಿದ್ದಾರೆ. ಕಬಳಿಕೆಯಾಗಿದ್ದ ಜಮೀನಿನ ಸುತ್ತ ಬೇಲಿ ನಿರ್ಮಿಸಿ, ಈ ಪ್ರದೇಶ ಬಿಬಿಎಂಪಿ ಗೆ ಸೇರಿದ್ದು ಎಂದು ನಾಮಫಲಕ ಹಾಕಿದ್ದಾರೆ.
ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಪಾಲಿಕೆಗೆ ಸೇರಿದ ಕೋಟ್ಯಂತರ ರೂ.ಬೆಲೆ ಬಾಳುವ ಜಮೀನನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ಸ್ಥಳೀಯ ಅಭಿಯಂತರರು ಪೊಲೀಸರಿಗೆ ದೂರು ನೀಡಿದ್ದ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.