ಅಕ್ರಮ-ಸಕ್ರಮ ಜಾರಿ : 20 ಸಾವಿರ ಕೋಟಿ ಆದಾಯ ನಿರೀಕ್ಷೆ

Social Share

ಬೆಂಗಳೂರು,ಆ.5- ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಿದ್ದ ಬಹುನಿರೀಕ್ಷೀತ ಅಕ್ರಮ – ಸಕ್ರಮ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 20 ಸಾವಿರ ಕೋಟಿ ಆದಾಯ ಬರುವ ಸಂಭವವಿದೆ.

ಮುಂಬರುವ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕರ್ನಾಟಕ ನಗರ ಪಾಲಿಕೆ ಕಟ್ಟಡಗಳ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ನಂತರ ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಇದು ಜಾರಿಯಾಗಲಿದೆ. ಬಿಬಿಎಂಪಿ ಸೇರಿ ರಾಜ್ಯಾದ್ಯಂತ ಕಂದಾಯ ಭೂಮಿಯಲ್ಲಿ ಅನಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅಕ್ರಮ -ಸಕ್ರಮ ಯೋಜನೆ ಶೀಘ್ರ ಜಾರಿಯಾಗುವ ನಿರೀಕ್ಷೆ ಮೂಡಿದ್ದು, ಬೊಕ್ಕಸಕ್ಕೆ ದಂಡ ಶುಲ್ಕದ ರೂಪದಲ್ಲಿ 20,000 ಕೋಟಿ ರೂ. ಆದಾಯ ಸಂಗ್ರಹವಾಗುವ ಅಂದಾಜಿದೆ.

ಬಡವರು ಮತ್ತು ಮಧ್ಯಮ ವರ್ಗದ ಜನರು ಸುಮಾರು 15 ವರ್ಷಗಳಿಂದ ನಿರೀಕ್ಷಿಸುತ್ತಿರುವ ಈ ಯೋಜನೆಯನ್ನು ಸಮೀಪಿಸುತ್ತಿರುವ ಚುನಾವಣೆ ಗುರಿಯಾಗಿಟ್ಟುಕೊಂಡು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲು ಸರಕಾರ ಬಯಸಿದೆ.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವಾದ ಕೂಡಲೇ ದಂಡ ಶುಲ್ಕದ ಪ್ರಮಾಣ ನಿಗದಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರಕಾರ ನಿರ್ಧರಿಸಿದೆ.

ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅಕ್ರಮ -ಸಕ್ರಮ ಯೋಜನೆ ಶೀಘ್ರ ಜಾರಿಯಾಗುವ ನಿರೀಕ್ಷೆ ಮೂಡಿದೆ. ಭೂಪರಿವರ್ತನೆಯಾಗದ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ವಾಸದ ಮನೆಗಳು, ಅನುಮೋದನೆ ಇಲ್ಲದ ಬಡಾವಣೆಗಳು, ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳನ್ನು ದಂಡ ಶುಲ್ಕ ವಿಧಿಸಿ ಸಕ್ರಮಗೊಳಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಸುಮಾರು 5 ಲಕ್ಷ ಮನೆಗಳು ಒಳಗೊಂಡು ಅಂದಾಜು 12 ಲಕ್ಷ ಆಸ್ತಿಗಳ ಸಕ್ರಮ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲು ಸರಕಾರ ಮುಂದಾಗಿದೆ. ಆದರೆ, 2,400 ಚದರಡಿಗಿಂತ (40/60) ಹೆಚ್ಚು ವಿಸ್ತೀರ್ಣದ ಆಸ್ತಿಗಳು ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಂಪೂರ್ಣ ಹೊರಗಿಡಲಾಗುತ್ತಿದೆ. ಈ ಯೋಜನೆ ಜಾರಿಯಿಂದಾಗಿ ರಾಜ್ಯ ಬೊಕ್ಕಸಕ್ಕೆ ದಂಡ ಶುಲ್ಕದ ರೂಪದಲ್ಲಿ 20,000 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುವ ಅಂದಾಜಿದೆ.

ಅಕ್ರಮ-ಸಕ್ರಮದಿಂದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಆದಾಯ ಹರಿದು ಬರುವುದರ ಜತೆಗೆ ಬಡ, ಮಧ್ಯಮ ವರ್ಗದವರ ಹಿತ ರಕ್ಷಣೆಯೂ ಆಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಬಿಬಿಎಂಪಿ ಸೇರಿ ರಾಜ್ಯದ ನಾನಾ ನಗರ ಪ್ರದೇಶಗಳಲ್ಲಿ 12 ಲಕ್ಷ ಅಕ್ರಮ ಆಸ್ತಿಗಳನ್ನು ಅಂದಾಜು ಮಾಡಿ, ಸಕ್ರಮಗೊಳಿಸಲು ಯೋಜನೆ ರೂಪಿಸಲಾಗಿತ್ತು.

ಈ ಹಿಂದಿನ ಬಿಜೆಪಿ, ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರಗಳ ಅವಧಿಯಲ್ಲಿ ಪ್ರಯತ್ನ ನಡೆದರೂ ಕಾರ್ಯಗತವಾಗಿರಲಿಲ್ಲ. ಈಗ ಕಾನೂನು ತೊಡಕು ನಿವಾರಣೆಯಾಗುತ್ತಿರುವುದು ಯೋಜನೆ ಜಾರಿಗೆ ಹಸಿರುನಿಶಾನೆ ತೋರಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಸ್ವಂತ ಸೂರಿನ ಕನಸಿಗೆ ಅಡ್ಡಿಯಾಗದಂತೆ ರಾಜ್ಯ ಸರಕಾರ ಮಾಡಿದ ಮನವಿಗೆ ಸ್ಪಂದಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನವು ತನ್ನ ಅರ್ಜಿಯನ್ನು ಕೋರ್ಟ್‍ನಿಂದ ಹಿಂಪಡೆಯುತ್ತಿದೆ.

ಇದರಿಂದ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆ ತೆರವಾಗಲಿದೆ. 2,400 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ, ಆಸ್ತಿಗಳನ್ನು ಸಕ್ರಮ ಮಾಡಬಾರದು ಮತ್ತು ವಾಣಿಜ್ಯ ಕಟ್ಟಡಗಳನ್ನು ಯೋಜನೆ ವ್ಯಾಪ್ತಿಯಿಂದ ಹೊರಗಿಸಬೇಕು ಎಂಬ ಪ್ರತಿಷ್ಠಾನದ ಎರಡು ಷರತ್ತುಗಳಿಗೆ ಸರಕಾರ ಒಪ್ಪಿದೆ.

ಈ ಎ ಖಾತಾ ಭಾಗ್ಯ ಸರ್ಕಾರದ ಈ ಯೋಜನೆಯ ಸದುದ್ದೇಶವನ್ನು ನ್ಯಾಯಾಲಯಕ್ಕೆ ತಿಳಿಸಿ ಪ್ರಕರಣಕ್ಕೆ ಮುಕ್ತಿ ಪಡೆಯಲು ಗಂಭೀರ ಚರ್ಚೆ ನಡೆಸಲಾಗಿದೆ. ಇದಕ್ಕೆ ಫಲ ದೊರೆತರೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಬಿ ಖಾತಾ ನಿವೇಶನಗಳಿಗೆ ಎ ಖಾತಾ ದೊರೆಯಲಿದೆ.

ಅಲ್ಲದೆ ಬಿಬಿಎಂಪಿ ಸೇರಿದಂತೆ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ರೆವಿನ್ಯೂ ನಿವೇಶಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಂದ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಿ ಖಾತಾ ನೋಂದಣಿ ನೀಡುವ ಕೆಲಸವಾಗಲಿದೆ.
ಜತೆಗೆ ಆ ಪ್ರದೇಶಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಸರ್ಕಾರದಿಂದ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಬಹುದು. ಅಂತಹ ನಿವೇಶನದಾರರಿಗೆ ಬ್ಯಾಂಕುಗಳಲ್ಲಿ ಉತ್ತಮ ಸಾಲಸೌಲಭ್ಯಗಳೂ ದೊರೆಯುವಂತಾಗಲಿದೆ.

ಒಟ್ಟಿನಲ್ಲಿ ಇದರಿಂದ ದೊಡ್ಡ ಮಟ್ಟದಲ್ಲಿ ಜನರಿಗೆ ಇದು ಉಪಯೋಗವಾಗಲಿದೆ. ಸರ್ಕಾರಕ್ಕೂ ಇದರಿಂದ ದೊಡ್ಡ ಮೊತ್ತದ ಆದಾಯವೂ ಬರಲಿದೆ 10 ಲಕ್ಷಕ್ಕೂ ಅಧಿಕ ಕಟ್ಟಡ ಅಂದಾಜಿನ ಪ್ರಕಾರ ನಗರದಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ, ನಕ್ಷೆ ಮಂಜೂರಾತಿಯಿಲ್ಲದೆ ನಿರ್ಮಾಣಗೊಂಡಿರುವ ಸುಮಾರು 10 ಲಕ್ಷಕ್ಕೂ ಅಧಿಕ ಕಟ್ಟಡಗಳಿವೆ ಎನ್ನಲಾಗಿದೆ.

ವಿಶೇಷವಾಗಿ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳಿವೆ. ಆ ಕಟ್ಟಡಗಳನ್ನು ಸಕ್ರಮಗೊಳಿಸುವ ಪ್ರಯತ್ನ ಸುಮಾರು 2 ದಶಕಗಳಿಂದ ನಡೆಯುತ್ತಿದೆ.

ವಸತಿ ಹಾಗೂ ವಾಣಿಜ್ಯ ಪ್ರದೇಶದಲ್ಲಿನ ಅಕ್ರಮ ಕಟ್ಟಡಗಳನ್ನು ಒಂದು ಬಾರಿಗೆ ಶುಲ್ಕ ವಿಧಿಸಿ ಸಕ್ರಮಗೊಳಿಸಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗುವುದು. ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ಆದಾಯ ಸಂಗ್ರಹವಾಗಲಿದೆ. ಇನ್ನೊಂದೆಡೆ ಆಸ್ತಿದಾರರಿಗೆ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ.

Articles You Might Like

Share This Article