ಮಂಡ್ಯ ಗಣಿ ಗಲಾಟೆ, ಈ ಮಧ್ಯ ಕುತೂಹಲ ಕೆರಳಿಸಿದೆ ಬಿಜೆಪಿ ಬಾಂಬ್..!

ಬೆಂಗಳೂರು,ಜು.9- ಮಂಡ್ಯ ಜಿಲ್ಲೆಯ ಕೆಅರ್ ಎಸ್ ಅಣೆಕಟ್ಟಿನ ಸುತ್ತಮುತ್ತಲಿನಲ್ಲಿ ಯಾವ್ಯಾವ ಶಾಸಕರು ಅಕ್ರಮ ಗಣಿಕಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಮುಂದಿನ ವಾರ ದಾಖಲೆಗಳ ಸಮೇತ ಬಿಡುಗಡೆ ಮಾಡುವುದಾಗಿ ಬಿಜೆಪಿ ಹೊಸ ಬಾಂಬ್ ಸಿಡಿಸಿದೆ.  ಒಂದೆಡೆ ಅಕ್ರಮಗಣಿಕಾರಿಕೆ ಕುರಿತಾಗಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕರ ನಡುವೆ ದಿನದಿಂದ ದಿನಕ್ಕೆ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ನಾಯಕರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಡಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ಕೆಆರ್‍ಎಸ್ ಸುತ್ತ ಅಕ್ರಮ ಗಣಿಗಾರಿಕೆ ಆರೋಪ ವಿಚಾರವಾಗಿ ಸೋಮವಾರ ಅಥವಾ ಮಂಗಳವಾರ ನಾವು ಸುದ್ದಿಗೋಷ್ಠಿ ನಡೆಸಿ ಕೆಲವು ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಇದರಲ್ಲಿ ಯಾವ್ಯಾವ ಶಾಸಕರು ಒಳಗೊಂಡಿದ್ದಾರೆ ಎಂಬುದನ್ನೂ ಹೇಳುತ್ತೇವೆ. ಇದಕ್ಕಾಗಿ ಈಗಾಗಲೇ ದಾಖಲೆಗಳನ್ನು ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ಅವರು ಅಕ್ರಮಗಣಿಗಾರಿಕೆ ಆರೋಪ ವಿಚಾರವಾಗಿ ಸಾಕಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ನಾನು ಇದರ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡ್ತೇನೆ. ಸೋಮವಾರ ಯಾವ ಶಾಸಕರಿದ್ದಾರೆಂದು ತಿಳಿಸುತ್ತೇನೆಂದು ಹೇಳಿದರು.

# ಮೋದಿ ಸಾಮಾಜಿಕ ನ್ಯಾಯ ನೀಡಿದ್ದಾರೆ:
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು, ಕೇಂದ್ರ ಸಚಿವ ಸಂಪುಟದಿಂದ ಡಿವಿಎಸ್ ಕೈಬಿಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯಕ್ಕೆ ನಾಲ್ಕು ಸ್ಥಾನ ಕೊಟ್ಟಿದ್ದಾರೆ. ಮೋದಿ ಅವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

ಭಗವಂತ ಖೂಬಾ ಅವರಿಗೆ ಸ್ಥಾನ ಕೊಟ್ಟಿದ್ದಾರೆ. ಕರ್ನಾಟಕದಿಂದ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆ. ಕರ್ನಾಟಕಕ್ಕೆ ಮೋದಿ ಏನು ಕೊಟ್ಟಿದ್ದಾರೆಂದು ಕಾಂಗ್ರೆಸ್‍ನವರು ಕೇಳುತ್ತಿದ್ದರು. ಈಗ ನಾಲ್ಕು ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಮೋದಿಯವರು ಸಾಮಾಜಿಕ ನ್ಯಾಯ ನೀಡಿದ್ದಾರೆ. ಮೋದಿ, ಶಾ, ನಡ್ಡಾಗೆ ರಾಜ್ಯ ಬಿಜೆಪಿಯಿಂದ ಅಭಿನಂದನೆ ಸಲ್ಲಿಸುವುದಾಗಿ ರವಿಕುಮಾರ್ ಹೇಳಿದರು.