ಐ ಲವ್ ಯು’ ಸಕ್ಸಸ್

Spread the love

ನಿರೀಕ್ಷೆಯಂತೆ ಬಿಡುಗಡೆಗೊಂಡು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವಂತಹ ಚಿತ್ರ ಐ ಲವ್ ಯು. ನಿರ್ಮಾಪಕ ಹಾಗೂ ನಿರ್ದೇಶಕ ಆರ್. ಚಂದ್ರು ಅವರ ಸಾರಥ್ಯದಲ್ಲಿ 25ನೆ ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿರುವ ಸಂಭ್ರಮವನ್ನು ಮೊನ್ನೆ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡರು. ಚಿತ್ರದಲ್ಲಿ ಅಭಿನಯಿಸಿದ ಉಪೇಂದ್ರ ಸೇರಿದಂತೆ ಇಡೀ ಚಿತ್ರತಂಡ ವೇದಿಕೆಯಲ್ಲಿ ಇದ್ದರು. ವೇದಿಕೆಯಲ್ಲಿ ಎಲ್ಲರೂ ತಮ್ಮ ಖುಷಿಯನ್ನು ಹಂಚಿಕೊಂಡರು.

ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು ಎಲ್ಲರ ಬಾಯಲ್ಲೂ ಚಂದ್ರು ಇನ್ನೆಂಥ ಚಿತ್ರ ತೆಗೆಯುತ್ತಾನೆ, ಅದೊಂದು ಹಳ್ಳಿ ಕತೆ ಆಗಿರುತ್ತೆ, ಅಲ್ಲಿ ಪ್ರೇಮ ಇರುತ್ತೆ ಎನ್ನುವ ಭಾವನೆ ಇತ್ತು, ಚಂದ್ರು ಇನ್ನೂ ಅಪ್‍ಡೇಟ್ ಆಗಿಲ್ಲ ಅನ್ನೋ ಮಾತನ್ನು ನನಗೂ ಹೇಳುತ್ತಿದ್ದರು. ಈ ಹಂತದಲ್ಲಿ ನಾನು ಯೋಚನೆ ಮಾಡಿದ್ದು ಬೇರೆಯದ್ದೇ ಆದ ಅಪ್‍ಡೇಟ್ ಕಥೆಗಾಗಿ. ಅದಕ್ಕಾಗಿ ಸ್ನೇಹಿತರ ಜೊತೆ ನಿರಂತರ ಚರ್ಚೆ ಮಾಡಿದೆ.

ಉಪೇಂದ್ರ ಅವರಿಗೆ ಕಥೆ ರೆಡಿ ಮಾಡಿಕೊಂಡು ಹೇಳಿದಾಗ, ಇದು ಚಂದ್ರು ಮಾಡಿದ ಕಥೆಯಾ ಎಂದು ಒಂದು ಕ್ಷಣ ಕಣ್ಣರಳಿಸಿದರು. ಜನ ಚಿತ್ರವನ್ನೂ ಇಷ್ಟಪಟ್ಟಿದ್ದಾರೆ. ಮುಂದೇನು ಎನ್ನುವ ಚಿಂತೆ ಮತ್ತು ಜವಾಬ್ದಾರಿ ನನ್ನ ಮುಂದಿದೆ ಎಂದು ಹೇಳಿದರು.

ವಿತರಕ ದಯಾನಂದ ಪೈ ಮತ್ತು ಅವರ ಮಗ ಧೀರಜ್ ಚಿತ್ರದ ಕಲೆಕ್ಷನ್ ನೋಡಿ ಸಂತಸಗೊಂಡಿದ್ದಾರೆ. ಇವರಲ್ಲಿ ನಾನು ಈ ಚಿತ್ರದಿಂದ ಒಂದು ವಿಶೇಷ ಗುಣವನ್ನು ನೋಡಿದ್ದೇನೆ. ಅಂತವರು ಗಾಂಧಿನಗರದಲ್ಲಿ ಇದ್ದರೆ ಯಾವುದೇ ನಿರ್ಮಾಪಕರ ಧೈರ್ಯ ಹೆಚ್ಚಾಗುತ್ತದೆ.

ಯಾವುದೇ ಚಿತ್ರ ಗೆಲ್ಲಲು ಒಂದು ಟೀಮ್ ವರ್ಕ್ ಕೆಲಸ ಮಾಡಬೇಕು. ಅದನ್ನು ಐಲವ್‍ಯು ಚಿತ್ರದಲ್ಲಿ ಕಂಡಿದ್ದೇನೆ ಎಂದು ಚಿತ್ರದ ನಾಯಕ ಉಪೇಂದ್ರ ಇಡೀ ಚಿತ್ರ ತಂಡವನ್ನು ಹೊಗಳಿದರು. ಸಾಮಾನ್ಯವಾಗಿ ಯಾವುದೇ ವಿತರಕರು ಕಲೆಕ್ಷನ್ ಇಷ್ಟು ಆಯಿತು ಎಂದು ನೇರವಾಗಿ ಹೇಳುವುದಿಲ್ಲ. ಆದರೆ ಚಿತ್ರದ ವಿತರಕ ದಯಾನಂದ ಪೈ ಅವರು ನನಗೆ ನಿತ್ಯ ಚಿತ್ರದ ಕಲೆಕ್ಷನ್ ತಿಳಿಸುತ್ತಾರೆ ಮತ್ತು ದಾಖಲೆಗಾಗಿ ಡಿಸಿಆರ್ ಕಳುಹಿಸುತ್ತಾರೆ. ಅದು ನೋಡಿದಾಗ ಚಿತ್ರದ ಈವರೆಗಿನ ಕಲೆಕ್ಷನ್ ಅಚ್ಚರಿ ಮೂಡಿಸುತ್ತದೆ ಎಂದು ಅವರು ಹೇಳಿದರು.

ನಾನು ಕೂಡಾ ಹೆಚ್ಚು ಕಮ್ಮಿ ಎರಡೂವರೆ ವರ್ಷದ ನಂತರ ಅಭಿನಯಿಸಿದ್ದೇನೆ. ಚಿತ್ರದ ಫಲಿತಾಂಶದ ಕುರಿತು ನನಗೂ ಒಂದು ಕಾತುರ ಇತ್ತು. ಐ ಲವ್ ಯು ಚಿತ್ರದ ಬಗ್ಗೆ ಹೇಳಬೇಕಾದರೆ ಚಿತ್ರ ನಿರೀಕ್ಷೆಗೂ ಮೀರಿ ಯಶ ಪಡೆದಿದೆ. ಚಂದ್ರು ಸಿನಿಮಾ ಬಿಟ್ಟು ಬೇರೆ ಏನನ್ನೂ ಯೋಚನೆ ಮಾಡುವುದಿಲ್ಲ. ಅಂಥವರ ಚಿತ್ರ ಯಶ ಪಡೆದರೆ ಅವರಿಗೆ ಮತ್ತೆ ಚಿತ್ರ ನಿರ್ಮಿಸಲು ಧೈರ್ಯ ಬರುತ್ತದೆ. ಆ ಧೈರ್ಯ ಚಂದ್ರುಗೆ ಐ ಲವ್ ಯು ತಂದು ಕೊಟ್ಟಿದೆ. ಅವರು ಇನ್ನಷ್ಟು ವಿಭಿನ್ನ ರುಚಿಯ ಚಿತ್ರಗಳನ್ನು ಮಾಡಲಿ ಎಂದು ಉಪೇಂದ್ರ ಹಾರೈಸಿದರು.

ಚಿತ್ರದ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು ಮಾತನಾಡಿ, ಈಗ ಐ ಲವ್ ಯು ಚಿತ್ರದ ಎಲ್ಲಾ ಹಾಡುಗಳೂ ಹಿಟ್ ಆಗಿವೆ. ಅದು ಚಿತ್ರಕ್ಕೂ ಮೆರುಗು ತಂದು ಕೊಟ್ಟಿದೆ ಎಂದು ಡಾ. ಕಿರಣ್ ವೇದಿಕೆಯಲ್ಲಿ ಹೇಳಿದರು.

ಚಿತ್ರಕ್ಕೆ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ಕೊಟ್ಟಿರುವ ಗುರುಕಿರಣ್ ಕೂಡಾ ಬಂದಿದ್ದರು. ಚಂದ್ರು ಸಿನಿಮಾ ಬಿಟ್ಟು ಬೇರೆ ಏನನ್ನೂ ಯೋಚಿಸುವುದಿಲ್ಲ. ನಿಜಕ್ಕೂ ಚಂದ್ರು ಸಾಹಸಿಗ ಎಂದು ಗುರುಕಿರಣ್ ಹೇಳಿದರು.

ಛಾಯಾಗ್ರಾಹಕ ಸುಜ್ಞಾನ್‍ಮೂರ್ತಿ, ಸಹನಟಿ ವಿದ್ಯಾ ಸೇರಿದಂತೆ ಚಿತ್ರತಂಡದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರಚಿತಾರಾಮ್ ಹಾಗೂ ಸೋನುಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ.  ಒಟ್ಟಾರೆ ಗೆಲುವಿನ ನಾಗಾಲೋಟ ಮುಂದುವರಿಸುತ್ತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐ ಲವ್ ಯು ತನ್ನ ಆರ್ಭಟ ಮುಂದುವರಿಸಿದೆ.

Facebook Comments