ಐಎಂಎ ವಂಚನೆ ಪ್ರಕರಣದ ಕುರಿತು ಎಸ್‍ಐಟಿ ತನಿಖೆ ಆರಂಭ

ಬೆಂಗಳೂರು,ಜೂ.13- ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಎಸ್‍ಐಟಿ ಈಗಾಗಲೇ ಆರಂಭಿಸಿದೆ.  ಐಎಂಎ ವಿರುದ್ಧ ದೂರು ದಾಖಲಾಗಿರುವ ಕಮರ್ಷಿಯಲ್‍ಸ್ಟ್ರೀಟ್ ಠಾಣೆಯ ಇನ್‍ಸ್ಪೆಕ್ಟರ್, ಎಸಿಪಿ, ಡಿಸಿಪಿ ಅವರುಗಳಿಂದ ಪ್ರಕರಣ ತನಿಖಾ ತಂಡದ ನೇತೃತ್ವ ವಹಿಸಿರುವ ಡಿಐಜಿ ರವಿಕಾಂತೇಗೌಡ ಅವರು, ನಿನ್ನೆ ರಾತ್ರಿಯೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಕೆಎಸ್‍ಆರ್‍ಪಿಯ ಸಂಶೋಧನಾ ಸಂಸ್ಥೆಯಲ್ಲಿ ರವಿಕಾಂತೇಗೌಡರ ನೇತೃತ್ವದಲ್ಲಿ ಎಸ್‍ಐಟಿಯ ಮೊದಲ ಸಭೆ ನಡೆಯಿತು.  ತನಿಖೆಯನ್ನು ಯಾವ ಯಾವ ದೃಷ್ಟಿಕೋನದಲ್ಲಿ ಮಾಡಬೇಕು, ಯಾವ ಅಧಿಕಾರಿ ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಐಎಂಎ ಕಂಪನಿಯ ಮಾಲೀಕ ಮನ್ಸೂರ್ ಖಾನ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹೋಗಿರಬಹುದು, ಅವರ ಕುಟುಂಬ ಎಲ್ಲಿದೆ, ಅವರುಗಳನ್ನು ಪತ್ತೆ ಮಾಡಲು ಯಾವ ಮಾರ್ಗ ಅನುಸರಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸುಧೀರ್ಘವಾಗಿ ಎಸ್‍ಐಟಿ ಅಧಿಕಾರಿಗಳು ಸಭೆಯಲ್ಲಿ ಸಮಾಲೋಚಿಸಿದ್ದಾರೆ. ಎಸ್‍ಐಟಿಯಲ್ಲಿ ಈಗ 11ಕ್ಕೂ ಹೆಚ್ಚು ವಿವಿಧ ದರ್ಜೆಯ ಅಧಿಕಾರಿಗಳು ಇದ್ದಾರೆ. ನಂತರ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಬಹುದು.

ಒಂದೇ ಕುಟುಂಬಕ್ಕೆ 46 ಲಕ್ಷ ವಂಚನೆ :  ನಗರದ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವವರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದು, ಅಂದಾಜಿನ ಪ್ರಕಾರ ಸುಮಾರು 25 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಕಳೆದ ಸೋಮವಾರ(ಜೂ.10) ಐಎಂಎ ಕಂಪನಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಅಂದು ಸಾವಿರಾರು ಸಂಖ್ಯೆಯಲ್ಲಿ ಹೂಡಿಕೆದಾರರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಹಣ ಹಿಂದಿರುಗಿಸಿ ಎಂದು ಮನವಿ ಮಾಡಿದ್ದರು.

ಅಂದಿನಿಂದ ಪೊಲೀಸರು ಗ್ರಾಹಕರಿಂದ ದೂರು ಸ್ವೀಕರಿಸುವ ಸಲುವಾಗಿ ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯ ಶಾಹಿದ್ ಮಹಲ್‍ನಲ್ಲೇ ಕುಳಿತು ದೂರು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ಬಂದು ವಂಚನೆಗೊಳಗಾದ ಗ್ರಾಹಕರು ದೂರು ನೀಡುತ್ತಿದ್ದಾರೆ. ಶನಿವಾರದವರೆಗೂ ದೂರು ನೀಡಲು ಅವಕಾಶವಿದೆ. ವಂಚನೆಗೊಳಗಾದ ಗ್ರಾಹಕರು ಬಂದು ದೂರು ನೀಡಬಹುದಾಗಿದೆ.

ಒಟ್ಟಾರೆ ಬೆಂಗಳೂರಿನ ಹೆಚ್ಚಿನ ನಿವಾಸಿಗಳೇ ಹೆಚ್ಚು ಹಣ ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಅಲ್ಲದೆ ತಾವು ಹೂಡಿಕೆ ಮಾಡುವುದರ ಜೊತೆಗೆ ತಮ್ಮ ತಮ್ಮ ಸಮುದಾಯದ ಸ್ನೇಹಿತರು, ಸಂಬಂಧಿಕರ ಬಳಿಯೂ ಹೂಡಿಕೆ ಮಾಡಿಸಿದ್ದ ಹಲವಾರು ಕುಟುಂಬುದವರಿಂದ ಇದೀಗ ನಿಂದನೆಗೊಳಗಾಗಿರುವುದಾಗಿ ಹಲವು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಈ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಹಲವರ ಪೈಕಿ ಮಧ್ಯಮ ವರ್ಗದ ಬಡ ಕುಟುಂಬದವರೇ ಹೆಚ್ಚಾಗಿದ್ದು , ಅವರುಗಳ ಅಳಲು ಹೇಳ ತೀರದಾಗಿದೆ. ಒಬ್ಬೊಬ್ಬರ ಕತೆಯೂ ಕರುಣಾಜನಕವಾಗಿದೆ. ಈ ಪ್ರಕರಣದಲ್ಲಿ ಒಬ್ಬರು ಕಿಡ್ನಿದಾನ ಮಾಡಿದಾಗ ಬಂದಂತಹ ಹಣವನ್ನು ಹೂಡಿಕೆ ಮಾಡಿದ್ದರೆ, ಹಲವು ಮಹಿಳೆಯರು ಮನೆ ಕೆಲಸದಿಂದ ಬಂದಂತಹ ಹಣವನ್ನು ಈ ಕಂಪೆನಿಗೆ ತಂದು ಸುರಿದಿದ್ದಾರೆ.

ಮತ್ತೆ ಕೆಲವರು ಬ್ಯಾಂಕ್‍ಗಳಲ್ಲಿದ್ದಂತಹ ಹಣವನ್ನು ತಂದು ಹೆಚ್ಚಿನ ಹಣದ ಆಸೆಗಾಗಿ ಈ ಕಂಪೆನಿಯಲ್ಲಿ ಹೂಡಿಕೆ ಮಾಡಿ ಇದೀಗ ಇದ್ದ ಹಣವನ್ನೂ ಕಳೆದುಕೊಂಡು ನಿದ್ದೆ-ಊಟ ಮಾಡದೆ ಕಂಗಾಲಾಗಿ ಕಣ್ಣೀರು ಹಾಕುತ್ತಾ ಪ್ರತಿದಿನ ಚಿಂತಿಸುವಂತಾಗಿದೆ.

ಇನ್ನು ಹಲವರು ಯಾರದ್ದೋ ಮಾತು ಕೇಳಿ ಊರುಗಳಲ್ಲಿದ್ದಂತಹ ಜಮೀನು, ಹೊಲ, ಚಿನ್ನಾಭರಣ ಮಾರಿ ಬಂದಂತಹ ಹಣವನ್ನು ಐಎಂಎ ಜ್ಯುವೆಲ್ಸ್‍ನಲ್ಲಿ ಹೂಡಿಕೆ ಮಾಡಿದ್ದರೆ, ಹಲವರು ಮಕ್ಕಳ ಮದುವೆ, ವಿದ್ಯಾಭ್ಯಾಸದ ಖರ್ಚು-ವೆಚ್ಚಕ್ಕಾಗಿ ಮುಂದೊಂದು ದಿನ ನೆರವಿಗೆ ಬರುತ್ತದೆಂಬ ದೂರದೃಷ್ಟಿಯಿಂದ ಹೂಡಿಕೆ ಮಾಡಿರುವ ಹಣವನ್ನೆಲ್ಲ ಕಳೆದುಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.