ಅವಧಿಪೂರ್ವ ಚುನಾವಣೆ ನಡೆಸದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ : ಇಮ್ರಾನ್ ಎಚ್ಚರಿಕೆ

ಲಾಹೋರ್, ಏ.22- ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ಇಮ್ರಾನ್ ಖಾನ್ ಲಾಹೋರ್‍ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದು, ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ ವಿದೇಶಿ ಶಕ್ತಿಗಳ ಬೂಟುಗಳನ್ನು ಪಾಲಿಶ್ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಅವಧಿಪೂರ್ವ ಚುನಾವಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಸೇನೆಯ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ರಾತ್ರಿ ಲಾಹೋರ್‍ನ ಮಿನಾರ್-ಇ-ಪಾಕಿಸ್ತಾನದಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ರ್ಯಾಲಿ ಉದ್ದೇಶಿಸಿ ಮಾತನಾಡಿದ ಖಾನ್, ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತಂದವರ ವಿರುದ್ಧ ವಾಗ್ದಾಳಿ ನಡೆಸಿದರು.

ಮಿಲಿಟರಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಖಾನ್, ನನ್ನ ಸರ್ಕಾರವನ್ನು ಪದಚ್ಯುತಗೊಳಿಸುವ ತಪ್ಪು ಮಾಡಿದವರು ಯಾವುದೇ ವಿಳಂಬವಿಲ್ಲದೆ ಹೊಸ ಚುನಾವಣೆಗಳನ್ನು ನಡೆಸುವ ಮೂಲಕ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ತಮ್ಮ ಪಕ್ಷದ ಕಾರ್ಯಕರ್ತರಿಗಷ್ಟೇ ಅಲ್ಲ, ಪಾಕಿಸ್ಥಾನದ ಎಲ್ಲಾ ಪ್ರಜೆಗಳಿಗೂ ದೇಶದ ರಾಜಧಾನಿ ಇಸ್ಲಾಮಾಬಾದ್‍ಗೆ ಆಗಮಿಸಿ ಸಮಾವೇಶಗೊಳ್ಳುವಂತೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ.

ನಾನು ಘರ್ಷಣೆಯನ್ನು ಬಯಸುವುದಿಲ್ಲ. ಆದರೆ ನಿಜವಾದ ಹೋರಾಟ ಇದೀಗ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಪ್ರಚಾರ ತೀವ್ರಗೊಳ್ಳುತ್ತದೆ. ನನ್ನ ಕರೆಗಾಗಿ ಕಾಯಿರಿ ಎಂದು ಜನರಿಗೆ ಹೇಳಿದ ಅವರು, ಅವಧಿಪೂರ್ವ ಚುನಾವಣೆಗಳನ್ನು ಹೊರತುಪಡಿಸಿ ನನಗೆ ಬೇರೇನೂ ಬೇಡ ಎಂದು ಸ್ಪಷ್ಟ ಪಡಿಸಿದರು.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಕೆಲ ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕೆ ಬೆಂಬಲ ನೀಡದ ಕಾರಣಕ್ಕೆ ತಮ್ಮನ್ನು ಪದಚ್ಯುತಗೊಳಿಸಲಾಯಿತು ಎಂದು ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಹೊಸ ಚುನಾವಣೆಗಳು ಘೋಷಣೆಯಾಗಿ ಪಾಕಿಸ್ತಾನದಲ್ಲಿ ನೈಜ ಪ್ರಜಾಪ್ರಭುತ್ವ ಸ್ಥಾಪನೆಯಾಗುವವರೆಗೂ ಮತ್ತು ಸ್ವಾತಂತ್ರ್ಯಕ್ಕಾಗಿ ಶಾಂತಿಯುತ ಹೋರಾಟವನ್ನು ಮುಂದುವರಿಸುವಂತೆ ಖಾನ್ ಜನರನ್ನು ಕೇಳಿಕೊಂಡರು. ಗುಲಾಮಗಿರಿ ಮತ್ತು ಆಮದು ಮಾಡಿಕೊಂಡ ಸರ್ಕಾರವನ್ನು ನಾವು ಸ್ವೀಕರಿಸುವುದಿಲ್ಲ. ಚುನಾವಣೆ ನಡೆದರೆ ಅವರು ಮನೆಗೆ ಹೋಗುತ್ತಾರೆ. ಏನೇ ಆಗಲಿ, ಲೂಟಿಕೋರರು ಮತ್ತು ಗುಲಾಮರ ಈ ಸರಕಾರವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಕಿಡಿಕಾರಿದರು.

ಕೇಂದ್ರ ಮತ್ತು ದಕ್ಷಿಣ ಏಷ್ಯಾದ ಅಮೆರಿಕಾ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಅಮೆರಿಕಾರದಲ್ಲಿ ಪಾಕಿಸ್ತಾನದ ರಾಯಭಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ. ತನ್ನ ಸರ್ಕಾರವನ್ನು ಪದಚ್ಯುತಗೊಳಿಸಲು ಅಮೆರಿಕಾ ಮಾಡಿದ ದೊಡ್ಡ ಪಿತೂರಿಯನ್ನು ಬಹಿರಂಗಪಡಿಸುವ ಪತ್ರವನ್ನು ಸುಪ್ರೀಂ ಕೋರ್ಟ್ ತನಿಖೆ ಮಾಡಬೇಕು ಎಂದು ಮಾಜಿ ಪ್ರಧಾನಿ ಒತ್ತಾಯಿಸಿದರು.

ಪತ್ರದ ತನಿಖೆಗಾಗಿ ಆಯೋಗ ರಚಿಸುವುದಾಗಿ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಪ್ರಸ್ತಾಪಿಸಿದ್ದಾರೆ. ಆದರೆ ಅದನ್ನು ನಾನು ನಾನು ತಿರಸ್ಕರಿಸುತ್ತೇನೆ. ನ್ಯಾಯಾಲಯವೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ಸರ್ಕಾರ ರಚಿಸಲು ಸಂಸದರ ಆತ್ಮಸಾಕ್ಷಿಯನ್ನು ಖರೀದಿಸಲಾಗಿದೆ ಮತ್ತು ವಿದೇಶಿ ಶಕ್ತಿಗಳ ಬೂಟುಗಳನ್ನು ಪಾಲಿಶ್ ಮಾಡಲಾಗಿದೆ.

ಈ ಚಳುವಳಿ ದುರ್ಬಲಗೊಳ್ಳುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಮ್ಮ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದೇನೆ. ದೇಶದಾದ್ಯಂತ ಹೋರಾಟದ ಕಿಚ್ಚು ಹೆಚ್ಚಾಗಲಿದೆ. ಬಹಳಷ್ಟು ಮಂದಿ ವಿದೇಶದಲ್ಲಿ ಆಸ್ತಿ ಮತ್ತು ಸಂಪತ್ತು ಹೊಂದಿದ್ದಾರೆ. ಅವರು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ, ನಾನು ಪಾಕಿಸ್ತಾನದಲ್ಲಿಯೇ ಬದುಕುತ್ತೇನೆ ಮತ್ತು ಇಲಿಯೇ ಸಾಯುತ್ತೇನೆ ಎಂದು ವಾಗ್ಧಾಳಿ ನಡೆಸಿ, ಮುಂದಿನ ಚುನಾವಣೆಯಲ್ಲಿ ಈ ದೇಶದ್ರೋಹಿಗಳಿಗೆ ಮತ ಹಾಕುವವರೂ ದೇಶದ್ರೋಹಿಗಳಾಗುತ್ತಾರೆ ಎಂದು ಹೇಳಿದರು.

ಇದೇ ವೇಳೆ ಭಾರತದ ಸ್ವತಂತ್ರ ವಿದೇಶಾಂಗ ನೀತಿ ಬಗ್ಗೆಯೂ ಇಮ್ರಾನ್ ಖಾನ್ ಟೀಕೆ ಮಾಡಿದರು, ಇತ್ತೀಚೆಗೆ ಅಧಿಕಾರದಿಂದ ಕೆಳಗಿಳಿಯುವ ಸಂದಂರ್ಭ ಬಂದಾಗ ಭಾರತವನ್ನು ಹೊಗಳಿದ್ದರು. ಹಿಂದೂಸ್ತಾನದ ವಿದೇಶಾಂಗ ನೀತಿ ಆ ದೇಶದ ಜನರಿಗಾಗಿ ಇದೆ. ನಮ್ಮ ವಿದೇಶಾಂಗ ನೀತಿ ಇತರ ಪರವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದ ದಿನವೇ ಪಾಕಿಸ್ತಾನಕ್ಕೆ ಸ್ವತಂತ್ರ ವಿದೇಶಾಂಗ ನೀತಿ ರಚಿಸುವುದು ನನ್ನ ಗುರಿ. ನಾವು ನಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯುತ್ತೇವೆ ಮತ್ತು ವಿದೇಶಿ ಶಕ್ತಿಗಳನ್ನು ಶಿಕ್ಷಿಸುತ್ತೇವೆ ಎಂದು ಘೋಷಿಸಿದ್ದಾರೆ. ಅವಿಶ್ವಾಸ ನಿರ್ಣಯ ಅಂಗೀಕರಿಸಿ ಅಕಾರದಿಂದ ಹೊರಹಾಕಲ್ಪಟ್ಟ ಪಾಕಿಸ್ತಾನದ ಏಕೈಕ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದಾರೆ. ವರ್ಷ ಐಎಸ್‍ಐ ಗೂಢಚಾರಿಕೆ ಸಂಸ್ಥೆ ಮುಖ್ಯಸ್ಥರ ನೇಮಕಾತಿ ಅನುಮೋದಿಸಲು ನಿರಾಕರಿಸಿದ ನಂತರ ನಂತರ ಇಮ್ರಾನ್ ಖಾನ್ ಮತ್ತು ಸೇನೆ ನಡುವೆ ಸಂಬಂಧ ಹದಗೆಡಲಾರಂಭಿತ್ತು ಎಂದು ಹೇಳಲಾಗಿದೆ.

ಪಾಕಿಸ್ತಾನದಲ್ಲಿ 73 ವರ್ಷಗಳ ಇತಿಹಾಸ ಹೊಂದಿರುವ ಸೇನೆ, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕಾಲ ಪಾಕಿಸ್ತಾನವನ್ನು ಆಳಿದೆ. ಭದ್ರತೆ ಮತ್ತು ವಿದೇಶಾಂಗ ನೀತಿಯಲ್ಲಿ ಸೇನೆಗೆ ಈಗಲೂ ಗಣನೀಯ ಅಧಿಕಾರ ಇದೆ.