ನ್ಯಾಯಾಂಗದಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ : ಪ್ರಧಾನಿ ಮೋದಿ

Social Share

ನವದೆಹಲಿ,ಜು.30- ತ್ವರಿತ ನ್ಯಾಯ ದಾನಕ್ಕಾಗಿ ನ್ಯಾಯಾಂಗದಲ್ಲಿ ಆಧುನಿಕ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳ ಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಖಿಲ ಭಾರತೀಯ ಜಿಲ್ಲಾ ಕಾನೂನು ಸೇವೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವದಲ್ಲಿದೆ. ದೇಶದ ನಾಗರಿಕರ ಹಕ್ಕುಗಳ ಸುಧಾರಣೆಯಲ್ಲಿ ಕಾನೂನು ಸೇವೆಯ ಪಾತ್ರ ಮಹತ್ವದ್ದಾಗಿದೆ. ದೇಹಕ್ಕೆ ಕಣ್ಣು, ಊಟಕ್ಕೆ ಉಪ್ಪು ಭೂಷಣವಿದ್ದಂತೆ ಸಮಾಜಕ್ಕೆ ನ್ಯಾಯಾಂಗದ ಅಗತ್ಯತೆ ಹೆಚ್ಚಿದೆ ಎಂದರು.

ಸಾಂವಿಧಾನಿಕ ಹಕ್ಕುಗಳ ಪ್ರಕಾರ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಪಡೆಯುವ ಹಕ್ಕುಗಳಿವೆ. ಜನ ಸಾಮಾನ್ಯರಿಗೂ ಮತ್ತು ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು. ಸಾಮಾನ್ಯರಿಗೆ ನ್ಯಾಯಾಂಗದ ಬಾಗಿಲು ಸದಾ ತೆರೆದಿರಬೇಕು. ಭರವಸೆ ಹೆಚ್ಚಬೇಕು. ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ತಮ್ಮ ಸರ್ಕಾರದ 8 ವರ್ಷದ ಆಡಳಿತಾವಯಲ್ಲಿ ನ್ಯಾಯಾಂಗದ ಮೂಲಸೌಲಭ್ಯಗಳ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ನ್ಯಾಯಾಲಯದ ಕೊಠಡಿಗಳ ಸಂಖ್ಯೆ ಹೆಚ್ಚಾಗಿವೆ. ನ್ಯಾಯದಾನ ಚುರುಕುಗೊಂಡಿದೆ ಎಂದು ತಿಳಿಸಿದರು.

ಈ ಮೊದಲು ಡಿಜಿಟಲ್ ಪೇಮೆಂಟ್ ಆರಂಭವಾದಾಗ ಅದು ಒಂದು ಸಣ್ಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ದೇಶದ ಹಳ್ಳಿ ಹಳ್ಳಿಯಲ್ಲೂ ಬಡವ ಹಾಗೂ ಜನ ಸಾಮಾನ್ಯರು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. ವಿಶ್ವದ ಡಿಜಿಟಲ್ ಪೇಮೆಂಟ್ನಲ್ಲಿ ಭಾರತ ಶೇ.40ರಷ್ಟು ಪಾಲು ಪಡೆದುಕೊಂಡಿದೆ ಎಂದರು.

ಇದೇ ರೀತಿ ನ್ಯಾಯಾಂಗದಲ್ಲೂ ಆಧುನಿಕತೆ ಅಳವಡಿಕೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ವಚ್ರ್ಯುವಲ್ ವಿಚಾರಣೆ ಆರಂಭವಾಯಿತು. ಈವರೆಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದು ಕೋಟಿ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಸುಮಾರು 6 ಲಕ್ಷ ಪ್ರಕರಣಗಳು ವಿಚಾರಣೆ ನಡೆಯುತ್ತಿವೆ ಎಂದು ಹೇಳಿದರು.

ವಚ್ರ್ಯುವಲ್ ಮಾದರಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಂತಹ ಅಪರಾಧಗಳಿಗೆ 24 ಗಂಟೆಯಲ್ಲೇ ವಿಚಾರಣೆ ಆರಂಭಿಸಲು ಸಾಧ್ಯವಿದೆ. ಸುಪ್ರೀಂಕೋರ್ಟ್ನ ನಿರ್ದೇಶನದಲ್ಲಿ ನ್ಯಾಯಾಂಗ ಆಧುನೀಕರಣವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಿದೆ. ಸಾಮಾನ್ಯ ನಾಗರಿಕರು ಸಂವಿಧಾನದಲ್ಲಿ ತಮ್ಮ ಹಕ್ಕುಗಳ ಬಗ್ಗೆ ತಿಳಿದರಬೇಕು. ಈ ಜಾಗೃತಿ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮಾತನಾಡಿ, ನಮ್ಮ ದೇಶದ ಸ್ವಂತ ಬಲ ಎಂದರೆ ಯುವ ಜನತೆ, ವಿಶ್ವದಲ್ಲಿ ಐದನೇ ಒಂದು ಭಾಗದಷ್ಟು ಯುವ ಸಮುದಾಯ ಭಾರತದಲ್ಲಿದೆ. ಆದರೆ, ಅವರಲ್ಲಿ ಕೌಶಲ್ಯ ಆಧಾರಿತ ಉದ್ಯೋಗಿಗಳ ಪ್ರಮಾಣ ಶೇ.3ರಷ್ಟು ಮಾತ್ರ. ಹೀಗಾಗಿ ನಾವು ಅವರನ್ನು ಕೌಶಲ್ಯ ಪೂರ್ಣಗೊಳಿಸವ ಅಗತ್ಯವಿದೆ. ಅದು ಯಶಸ್ವಿಯಾದರೆ ಜಾಗತಿಕವಾಗಿ ಸೃಷ್ಟಿಯಾಗಿರುವ ಅಂತರವನ್ನು ಭರ್ತಿ ಮಾಡಲು ಸಾಧ್ಯ ಎಂದರು.

ಬಹುತೇಕ ಮಂದಿ ಜಾಗೃತಿಯ ಕೊರತೆಯಿಂದಾಗಿ ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ ಕಾನೂನಿನ ಅರಿವು ಮತ್ತು ನ್ಯಾಯದ ಅಸ್ತ್ರವನ್ನು ಸಾಮಾಜಿಕ ಸಬಲೀಕರಣಕ್ಕೆ ಕೊಡುವ ಅಗತ್ಯವಿದೆ ಎಂದು ಹೇಳಿದರು. ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು, ನ್ಯಾಯಾೀಶರಾದ ಉದಯ್ ಯು.ಲಲಿತ್, ಡಿ.ವೈ.ಚಂದ್ರಚೂಡ್ ಮತ್ತಿತರರಿದ್ದರು.

Articles You Might Like

Share This Article