ಕೆಜಿಎಫ್ ಬಾಬು ಸೇರಿ ಹಲವು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಬೆಂಗಳೂರು, ಮೇ 28-ಕಾಂಗ್ರೆಸ್ ಮುಖಂಡ ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಸೇರಿದಂತೆ ಹಲವು ಉದ್ಯಮಿಗಳ ಮನೆಗಳು, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕ-ತಮಿಳುನಾಡಿನ ಹಲವು ಕಡೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ತಂಡೋಪತಂಡವಾಗಿ ಮುಂಜಾನೆಯೇ ಉದ್ಯಮಿಗಳ ಮನೆ ಬಾಗಿಲು ಬಡಿದ ಅಧಿಕಾರಿಗಳು, ಆದಾಯದ ಮೂಲಗಳು ಹಾಗೂ ಸಂಪತ್ತು ಗಳಿಕೆಯ ತಪಾಸಣೆ ನಡೆಸಿದ್ದಾರೆ. ಕೆಲವರ ಮನೆಗಳಿಂದ ಪ್ರಮುಖ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ.

ತಮಿಳುನಾಡಿನ ಶ್ರೀ ಆನಂದಾಸ್ ಗ್ರೂಪ್ಸ್ ಆಫ್ ಹೊಟೇಲ್‍ಗೆ ಸೇರಿದ 20 ಸ್ಥಳಗಳ ಮೇಲೆ ಆದಾಯ ತೆರಿಗೆಯ ಅಧಿಕಾರಿಗಳ 40 ತಂಡಗಳು ದಾಳಿ ನಡೆಸಿವೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ತಮಿಳುನಾಡಷ್ಟೆ ಅಲ್ಲ ಅಂತರಾಜ್ಯ ವಹಿವಾಟು ನಡೆಸುತ್ತಿರುವ ಆನಂದಾಸ್ ಗ್ರೂಪ್‍ಗೆ ಈ ದಾಳಿ ಶಾಕ್ ನೀಡಿದೆ.

ಇನ್ನು ಕರ್ನಾಟಕದಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 4 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದೇನೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಯೂಸೂಫ್ ಶರೀಫ್ ಮನೆ ಹಾಗೂ ಕಚೇರಿ ಮೇಲೆ ದಾಳಿಯಾಗಿದೆ.

ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿದ್ದ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ವಿಧಾನ ಪರಿಷತ್‍ನ ಸ್ಥಳೀಯ ಸಂಸ್ಥೆಗಳಿಗೆ ಕಳೆದ ಬಾರಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಾಲಿವುಡ್ ಬಾದಶಾ ಅಮಿತಾ ಬಚ್ಚನ್ ಅವರ ಐಶರಾಮಿ ರೂಲ್ಸ್‍ರಾಯ್ ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಮೂರು ರೂಲ್ಸ್‍ರಾಯ್ ಕಾರುಗಳ ಮಾಲೀಕ ತಾನು ಎಂದು ಹೇಳಿಕೊಳ್ಳುತ್ತಿದ್ದ ಬಾಬು, ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದಕ್ಕಾಗಿ ಕ್ಷೇತ್ರದಲ್ಲಿ ಹಲವು ಚಟುವಟಿಕೆಗಳಿಗೆ ಹಣ ಖರ್ಚು ಮಾಡಲಾರಂಭಿಸಿದರು.

ಅವರ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.