ಕಾಲಿವುಡ್ ಚಿತ್ರರಂಗದ ಮೇಲೆ ಇಡಿ ದಾಳಿ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

Social Share

ಚೆನ್ನೈ, ಆ.10- ತಮಿಳುನಾಡಿನ ಚಲನಚಿತ್ರರಂಗದ ಮೇಲೆ ತಿಂಗಳ ಆರಂಭದಲ್ಲಿ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ 26 ಕೋಟಿ ನಗದು, 3 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 200 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಚಲನಚಿತ್ರ ನಿರ್ಮಾಪಕರು, ಹಂಚಿಕೆದಾರರು, ಹಣಕಾಸು ಸಂಸ್ಥೆಗಳಿಗೆ ಸೇರಿದ ಚೆನ್ನೈ, ಮಧುರೈ, ಕೊಯಮತ್ತೂರು, ವೇಲೂರು ಸೇರಿದಂತೆ 40 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಕೆಲವು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ಲೆಕ್ಕಕ್ಕೆ ಸಿಗದ ನಗದು, ವ್ಯವಹಾರ, ಹೂಡಿಕೆಗಳು, ರಹಸ್ಯವಾಗಿ ಇಡಲಾದ ಹಣಕಾಸು ವಹಿವಾಟು ಬಹಿರಂಗಗೊಂಡಿದೆ.

ಸಿನಿಮಾ ಕ್ಷೇತ್ರದಲ್ಲಿರುವವರು ಪ್ರಾಮಿಸರಿ ನೋಟ್ಗಳು ಸೇರಿದಂತೆ ಕೆಲವು ದಾಖಲೆಗಳ ಮೇಲೆ ಅನಕೃತ ಹಣಕಾಸು ವಹಿವಾಟು ನಡೆಸಿದ್ದಾರೆ. ಬಹಳಷ್ಟು ನಿರ್ಮಾಣ ಸಂಸ್ಥೆಗಳಿಗೆ ಮುಂಗಡ ನೀಡಲಾಗಿದೆ. ಸಿನಿಮಾ ಬಿಡುಗಡೆ ವೇಳೆ ಸಂಗ್ರಹಿಸಲಾದ ಆದಾಯವನ್ನು ಸಿಂಡಿಕೇಟ್ ರಚಿಸಿಕೊಂಡು ಮುಚ್ಚಿಡಲಾಗಿದೆ.

ಲೆಕ್ಕ ಪುಸ್ತಕದಲ್ಲಿರುವ ಮಾಹಿತಿಯೇ ಬೇರೆ. ಅಸಲಿಗೆ ಸಂಗ್ರಹವಾದ ಆದಾಯವೇ ಬೇರೆ. ಜತೆಗೆ ರಹಸ್ಯ ಹೂಡಿಕೆಗಳು ಕೂಡ ಪತ್ತೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆದಾಯ ತೆರಿಗೆ ಈ ಕಾರ್ಯಾಚರಣೆಯನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆದ ಐಪಿಎಸ್ ಅಧಿಕಾರಿ ಡಿ.ರೂಪಾ ಶ್ಲಾಘಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ ಅಧಿಕಾರಿ ರೋಹಿಣಿ ದಿವಾಕರ್ ಮತ್ತು ಸಹೋದ್ಯೋಗಿಗಳನ್ನು ಅಭಿನಂದಿಸಿರುವ ರೂಪಾ, ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಶಕ್ತಿ ಮತ್ತಷ್ಟು ಹೆಚ್ಚಲಿ ಎಂದಿದ್ದಾರೆ.

Articles You Might Like

Share This Article