ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಿಮಿಸಿದ ಮೀಸಲಾತಿ ಹೆಚ್ಚಳ

Social Share

ಬೆಂಗಳೂರು,ಅ.19-ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಬೆನ್ನಲ್ಲೇ, ಇದೀಗ ಇತರ ಸಮುದಾಯದವರು ಕೂಡ ತಮಗೂ ಮೀಸಲಾತಿ ಹೆಚ್ಚಿಸುವಂತೆ ಒತ್ತಡ ಹಾಕುತ್ತಿರುವುದು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಿಮಿಸಿದೆ.

ಚುನಾವಣೆಯಲ್ಲಿ ಯಾವುದೇ ಪಕ್ಷದ ಸೋಲು ಗೆಲುವನ್ನು ನಿರ್ಧರಿಸುವ ಪಂಚಮಸಾಲಿ, ಒಕ್ಕಲಿಗ, ಕುರುಬ, ಮರಾಠ ಸೇರಿದಂತೆ ವಿವಿಧ ಸಮುದಾಯದ ಮಠಾೀಶರು, ಮುಖಂಡರು ಸೇರಿದಂತೆ ಬಹಿರಂಗವಾಗಿಯೇ ತಮಗೂ ಶಿಕ್ಷಣ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನ್ಯಾ.ನಾಗಮೋಹನದಾಸ್ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇನೋ ಆಯಿತು. ಈಗ ಅವರ ಬೇಡಿಕೆ ಈಡೇರಿಸಿ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಪಂಚಮಸಾಲಿ ಲಿಂಗಾಯತರು ಮತ್ತು ಕುರುಬರು ಆಕ್ರೋಶಗೊಳ್ಳುತ್ತಾರೆ ಎಂಬ ಅಂಶ ಹೊರಬಿದ್ದಿದೆ.

ತಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ. ಈ ಪೈಕಿ ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ದೊಡ್ಡ ಘಾಸಿಯಾಗಲಿದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆ ತಿಳಿಸಿದೆ.

ಆದರೆ ಈ ವಿಷಯ ಬಿಜೆಪಿಗೆ ಎರಡು ಕಡೆಯಿಂದ ತಲೆಬಿಸಿ ಮಾಡುತ್ತಿದ್ದು, ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಒಪ್ಪದಿದ್ದರೂ ಕಷ್ಟ. ಒಪ್ಪಿದರೂ ಕಷ್ಟ ಎಂಬಂತಾಗಿದೆ. ಯಾಕೆಂದರೆ ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ಪ್ರವರ್ಗ 2ಎ ಗೆ ಸೇರಿಸಿದರೆ ಈಗ ಆ ಪ್ರವರ್ಗದಲ್ಲಿರುವವರು ತಮಗೆ ಸಿಗುವ ಮೀಸಲಾತಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ಬೀದಿಗಿಳಿಯುತ್ತಾರೆ. ಇನ್ನು ಕುರುಬ ಸಮುದಾಯದ ಬೇಡಿಕೆ ವಿಷಯವೂ ಬಿಜೆಪಿ ಪಾಲಿಗೆ ತಲೆನೋವಾಗಿದೆ.

ಒಪ್ಪಿದರೂ ಕಷ್ಟ, ಒಪ್ಪದಿದ್ದರೂ ಕಷ್ಟ ಎಂಬುದು ಅದರ ಯೋಚನೆ. ಒಂದು ವೇಳೆ ಒಪ್ಪದೆ ಇದ್ದರೆ ಕುರುಬ ಸಮುದಾಯವನ್ನು ಬಿಜೆಪಿ ಕಡೆ ಸೆಳೆಯಬೇಕು. ಆ ಮೂಲಕ ಪ್ರತಿ ವಿಧಾನಸಭಾ ಚುನಾವಣೆಯ ನಂತರ ಎದುರಿಸುತ್ತಿರುವ ಬಹುಮತದ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಶುರುವಿನಲ್ಲಿ ಬಿಜೆಪಿಯ ಲೆಕ್ಕಾಚಾರವಾಗಿತ್ತು.

ಆದರೆ ಅವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಈಗಷ್ಟೇ ಮೀಸಲಾತಿ ಹೆಚ್ಚಳದಿಂದ ಸಮಾಧಾನಗೊಂಡಿರುವ ಪರಿಶಿಷ್ಟ ಪಂಗಡದಲ್ಲಿ ಆಕ್ರೋಶ ಕಾಣಿಸಿಕೊಳ್ಳಬಹುದು. ರಾಜ್ಯದ ಶೇ.7ರಷ್ಟು ಜನಸಂಖ್ಯೆ ಇರುವ ತಮಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವುದು ನ್ಯಾಯ. ಆದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳಗೊಳಿಸಿ, ಶೇ.8ರಷ್ಟಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಈಗಿರುವವರಿಗೆ ಅನ್ಯಾಯವಾಗುತ್ತದೆ. ಆಗ ಶೇ.15ರಷ್ಟು ಜನ ಶೇ.7ರಷ್ಟು ಮೀಸಲಾತಿಗಾಗಿ ಪೈಪೋಟಿ ನಡೆಸಬೇಕಾಗುತ್ತದೆ.

ಇದು ಯಾವ ದೃಷ್ಟಿಯಿಂದಲೂ ಸಮರ್ಪಕವಲ್ಲ ಎಂಬುದು ಪರಿಶಿಷ್ಟ ಪಂಗಡದ ವಾದವಾಗಿದ್ದರೆ, ಈ ಪಟ್ಟಿಗೆ ತಮ್ಮನ್ನು ಸೇರಿಸಲೇಬೇಕು ಎಂದು ಬಿಗಿ ಪಟ್ಟು ಹಾಕಿರುವ ಕುರುಬ ಸಮುದಾಯ, ತನ್ನ ಬೇಡಿಕೆ ಈಡೇರದಿದ್ದರೆ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಬಹುದು.

ಹೀಗಾಗಿ ಯಾವ ದೃಷ್ಟಿಯಿಂದ ನೋಡಿದರೂ ಪಂಚಮಸಾಲಿ ಲಿಂಗಾಯತ ಮತ್ತು ಕುರುಬರ ಬೇಡಿಕೆ ಬಿಜೆಪಿ ಪಾಲಿಗೆ ತಲೆಬಿಸಿಯಾಗಿದ್ದು, ಇದನ್ನು ನಿಭಾಯಿಸುವುದು ಹೇಗೆ? ಎಂಬ ಗೊಂದಲದಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Articles You Might Like

Share This Article