ಬೆಂಗಳೂರಿಗರೇ ಈ ವಾರ್ಡ್‍ಗಳಲ್ಲಿ ಓಡಾಡುವ ಮುನ್ನ ಹುಷಾರ್..!

Social Share

ಬೆಂಗಳೂರು,ಜ.6-ನಗರದ ಈ ಹತ್ತು ವಾರ್ಡ್‍ಗಳಲ್ಲಿ ಸಂಚರಿಸುವ ಮುನ್ನ ಇರಲಿ ಎಚ್ಚರ… 198 ವಾರ್ಡ್‍ಗಳಲ್ಲಿ 10 ವಾರ್ಡ್‍ಗಳಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವುದರಿಂದ ನೀವು ವ್ಯಾಪಾರ ವಹಿವಾಟಿಗಾಗಿ ಈ ವಾರ್ಡ್‍ಗಳಿಗೆ ತೆರಳುವ ಮುನ್ನ ಸ್ವಲ್ಪ ಯೋಚಿಸಬೇಕಿದೆ. ಉದಾಸೀನ ಮಾಡಿದರೆ ನೀವು ಮಹಾಮಾರಿಯನ್ನು ಮನೆಗೆ ಕರೆದುಕೊಂಡು ಬರಬೇಕಾಗುತ್ತದೆ. ಹೀಗಾಗಿ ಇರಲಿ ಎಚ್ಚರ.
ಹಾಗಾದ್ರೆ ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವ ಆ 10 ವಾರ್ಡ್‍ಗಳು ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ. ಬೆಳ್ಳಂದೂರು, ದೊಡ್ಡನಕ್ಕುಂದಿ,, ಹಗದೂರು, ಎಚ್‍ಎಸ್‍ಆರ್ ಬಡಾವಣೆ, ವರ್ತೂರು, ಕೋರಮಂಗಲ, ನ್ಯೂ ತಿಪ್ಪಸಂದ್ರ, ಹೊರಮಾವು, ಶಾಂತಲಾ ನಗರ ಹಾಗೂ ಬೇಗೂರು ವಾರ್ಡ್‍ಗಳಲ್ಲಿ ಪ್ರತಿನಿತ್ಯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ನಿನ್ನೆ ಒಂದೇ ದಿನ ಈ ವಾರ್ಡ್‍ಗಳಲ್ಲಿ 100ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಬೆಳ್ಳಂದೂರಿನಲ್ಲಿ 41, ದೊಡ್ಡನಕ್ಕುಂದಿ, ಹಗದೂರಿನಲ್ಲಿ ತಲಾ 17, ಹೆಚ್‍ಎಸ್‍ಆರ್ ಬಡಾವಣೆಯಲ್ಲಿ 13, ವರ್ತೂರು ಹಾಗೂ ಕೋರಮಂಗಲದಲ್ಲಿ ತಲಾ 12, ನ್ಯೂ ತಿಪ್ಪಸಂದ್ರದಲ್ಲಿ 11 ಹಾಗೂ ಶಾಂತಲಾ ನಗರ ಮತ್ತು ಬೇಗೂರಿನಲ್ಲಿ ತಲಾ 10 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಡೇಂಜರ್ ಜೋನ್‍ನಲ್ಲಿರುವ ಈ ಹತ್ತು ವಾರ್ಡ್‍ಗಳಲ್ಲಿ ಓಡಾಡುವ ಮುನ್ನ ಎಚ್ಚರವಹಿಸುವುದು ಸೂಕ್ತವಾಗಿದೆ.
# 4 ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣಗಳು:
ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಉಲ್ಬಣಿಸುತ್ತಲೆ ಇದೆ. ನಿನ್ನೆ ಒಂದೇ ದಿನ 3605 ಕೊರೊನಾ ಪ್ರಕರಣಗಳು ದಾಖಲಾಗಿತ್ತು, ಇಂದು ನಾಲ್ಕು ಸಾವಿರದ ಗಡಿ ದಾಟುವ ಸಾಧ್ಯತೆಗಳಿವೆ. ಇಂದು 4523ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
# ಆತಂಕ ಬೇಕಿಲ್ಲ:
ಪ್ರತಿನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿದ್ದರೂ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಕಡಿಮೆ ಇರುವುದರಿಂದ ಜನ ಆತಂಕಪಡಬೇಕಾಗಿಲ್ಲ. ಸೋಂಕು ಕಾಣಿಸಿಕೊಂಡ ಬಹುತೇಕ ಮಂದಿ ತಮ್ಮ ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗಿ ಗುಣಮುಖರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸರ್ಕಾರ ಕೊರೊನಾ ಸೋಂಕಿತರಿಗಾಗಿ 1926 ಬೆಡ್‍ಗಳನ್ನು ಮೀಸಲಿರಿಸಿದೆ. ಆದರೆ, ಈ ಆಸ್ಪತ್ರೆಗಳಲ್ಲಿ ಇದುವರೆಗೂ ದಾಖಲಾಗಿರುವುದು ಕೇವಲ 91 ಮಂದಿ ಮಾತ್ರ ಎಂಬುದು ಉಲ್ಲೇಖಾರ್ಹ. ಪಾಲಿಕೆ ವ್ಯಾಪ್ತಿಯಲ್ಲಿರುವ 4 ಮೆಡಿಕಲ್ ಕಾಲೇಜ್‍ಗಳಲ್ಲಿ 770 ಬೆಡ್‍ಗಳನ್ನು ಹಂಚಿಕೆ ಮಾಡಲಾಗಿದೆ ಈ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಸಂಖ್ಯೆ ಕೇವಲ 35.
ಇನ್ನು 16 ಸರ್ಕಾರಿ ಆಸ್ಪತ್ರೆಗಳಲ್ಲಿ 1066 ಬೆಡ್ ಮಾಡಿದ್ದರೂ ಇಲ್ಲಿರುವ ಸೋಂಕಿತರ ಸಂಖ್ಯೆ ಕೇವಲ 40 ಮಾತ್ರ. ಇದರ ಜತೆಗೆ ನಗರದಲ್ಲಿರುವ ಎರಡು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 90 ಬೆಡ್ ವ್ಯವಸ್ಥೆ ಮಾಡಿದ್ದರೂ ಅಲ್ಲಿರುವವರ ಸಂಖ್ಯೆ ಕೇವಲ 16.
ಅದರಲ್ಲೂ 29 ಮಂದಿ ಜನರಲ್ ಬೆಡ್‍ಗಳಲ್ಲಿದ್ದರೆ, ಹೆಚ್‍ಡಿಯು ಬೆಡ್‍ಗಳಲ್ಲಿ 54, ಐಸಿಯುನಲ್ಲಿ ಆರು ಹಾಗೂ ಐಸಿಯು ವೆಂಟಿಲೇಟರ್‍ನಲ್ಲಿ ಕೇವಲ 2 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Articles You Might Like

Share This Article