3 ಸಾವಿರ ಅಡಿ ಉದ್ದದ ರಂಗೋಲಿ ರಾಷ್ಟ್ರಧ್ವಜ ..!

ಬೆಂಗಳೂರು, ಆ.14- 73ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಪ್ತಗಿರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮೂರು ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ರಾಷ್ಟ್ರಧ್ವಜದ ರಂಗೋಲಿ ಬಿಡಿಸಿ ದೇಶದ ಪಾರಮ್ಯ ಮೆರೆದಿದ್ದಾರೆ. ಜಮ್ಮು – ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರಿ ರದ್ದು, ಕಣಿವೆ ರಾಜ್ಯ ಭಾರತದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಿರುವ ಈ ಸುಸಂದರ್ಭದಲ್ಲಿ ದೇಶಕ್ಕೆ ಒಂದು ನಮನ ಎನ್ನುವ ಪರಿಕಲ್ಪನೆಯಡಿ ಈ ತ್ರಿವರ್ಣ ಧ್ವಜ ಅರಳಿದೆ.

ವಿನೂತನ ಮಾದರಿಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗಾಗಿ 300 ಕೆಜಿ ರಂಗೋಲಿ ಬಿಳಿ, ಕೇಸರಿ ಹಸಿರು ಬಣ್ಣವನ್ನು ತಿರಂಗ ಧ್ವಜದ ರಂಗೋಲಿಗೆ ಬಳಸಲಾಗಿದೆ.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸುವ ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 300ಕ್ಕೂ ವಿದ್ಯಾರ್ಥಿಗಳು ನವ ನವೀನ ರೀತಿಯಲ್ಲಿ ತ್ರಿವರ್ಣ ಧ್ವಜ ಬಿಡಿಸಿ ಗಮನ ಸೆಳೆದರು.

ಜಮ್ಮು-ಕಾಶ್ಮೀರದಲ್ಲಿ ಏಳು ದಶಕಗಳ ನಂತರ ಮೊದಲ ಬಾರಿಗೆ ಸ್ವಾತಂತ್ರ್ಯ ಧ್ವಜ ಹಾರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ದಿಟ್ಟ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರ ಭಾರತದ ಮುಖ್ಯ ವಾಹಿನಿಗೆ ಸೇರಿದೆ. ಹೀಗಾಗಿ ನಮ್ಮ ಕಾಲೇಜಿನ ಆಡಳಿತ ಮಂಡಳಿ ಇಂತಹ ಮಹತ್ವಪೂರ್ಣ ರಂಗೋಲಿ ಬಿಡಿಸಲು ಪ್ರೋತ್ಸಾಹಿಸಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ರಾಮಕೃಷ್ಣ, ಪಿಇಡಿ ಶಂಕರರಾವ್ ಸಿಂಧೆ, ಉಪ ಪ್ರಾಂಶುಪಾಲ ಎಂ.ಎಚ್. ಅಣ್ಣಯ್ಯ, ಪ್ರೊಫೆಸರ್ ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.