ಸ್ವಾತಂತ್ರ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ

ಬೆಂಗಳೂರು,ಆ.15- ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ 73ನೇ ರಾಜ್ಯಮಟ್ಟದ ಸಮಾರಂಭದಲ್ಲಿ ಧ್ವಜಾರೋಹಣದ ನಂತರ ದೇಶದ ಏಕತೆ, ರಾಷ್ಟ್ರಪ್ರೇಮ ಬಿಂಬಿಸುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಬಿಬಿಎಂಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಶಾಲೆಗಳ 1250ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಮೃತ್ಯುಂಜಯ ದೊಡ್ಡವಾಳ ತಂಡದಿಂದ ನಾಡಗೀತೆ ಮತ್ತು ರೈತಗೀತೆ ಕಾರ್ಯಕ್ರಮ ನಡೆಯಿತು. ಬೆಂಗಳೂರು ದಕ್ಷಿಣ ವಲಯ , ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 650 ಮಕ್ಕಳು ಭಾರತಾಂಬೆಯ ಮಡಿಲಿನ ಮಕ್ಕಳು ಎಂಬ ನೃತ್ಯರೂಪಕವನ್ನು ನಡೆಸಿಕೊಟ್ಟರು.  ಹೇರೋಹಳ್ಳಿ ಬಿಬಿಎಂಪಿ ಪ್ರೌಢಶಾಲೆಯ 600 ಮಕ್ಕಳು ಜಲಿಯನ್ ವಾಲಾಬಾಗ್ ಹತ್ಯಾಕಾಂಡ 1919 ಎಂಬ ಸ್ವಾತಂತ್ರ್ಯ ಸಂಗ್ರಾಮದ ಮಾಹಿತಿ ಒಳಗೊಂಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರೆ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನ 26 ಸದಸ್ಯರು ಜಿಮ್ನಾಸ್ಟಿಕ್‍ನ್ನು ಪ್ರದರ್ಶಿಸಿದರು.

ತಮಿಳುನಾಡಿನ ವಿಲ್ಲಿಂಗ್ಟನ್, ಮದ್ರಾಸ್ ರೆಜಿಮೆಂಟ್ ಸೆಂಟರ್‍ನ 29 ಸದಸ್ಯರು, ಕಲಾರಿಪಯಟ್ಟು(ಮಾರ್ಷಿಯಲ್ ಆರ್ಟ್) ಪ್ರದರ್ಶಿಸಿದರು.
ವಿವಿಧ ಶಾಲಾ ಮಕ್ಕಳು ಪ್ರದರ್ಶಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳ ತಂಡಗಳಲ್ಲಿ ವಿಜೇತರಾದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಹುಮಾನ ವಿತರಿಸಿದರು.

ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು. ನಂತರ ಪೆರೇಡ್ ವೀಕ್ಷಿಸಿದ ಮುಖ್ಯಮಂತ್ರಿಗಳು ಗೌರವರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಜವಾಹಾರ್ ನವೋದಯ ಶಾಲೆ ಮಕ್ಕಳಿಂದ ರಾಷ್ಟ್ರಗೀತೆ ಹಾಡಲಾಯಿತು. ಕೆಎಸ್‍ಆರ್‍ಪಿ, ಸ್ಕೌಟ್ಸ್ ಗೈಡ್ಸ್ , ಎನ್‍ಸಿಸಿ, ಸೇವಾದಳ ಮತ್ತು ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡ್‍ನ 34 ತುಕಡಿಗಳು ಪಥಸಂಚಲನ ನಡೆಸಿದರು.