ಹೆಚ್.ಡಿ.ಕುಮಾರಸ್ವಾಮಿ ಸ್ವಾತಂತ್ರ್ಯೋತ್ಸವ ಭಾಷಣ

Social Share

ಬೆಂಗಳೂರು,ಆ.15- ದೇಶದಲ್ಲಿ ಮಾನವೀಯತೆ, ಮಾನವನ ಬದುಕಿನ ಬಗ್ಗೆ ಚಿಂತಿಸುವ ಅಗತ್ಯವಿದ್ದು, ಸರ್ವರಿಗೂ ಸಮಬಾಳು, ಸಮಪಾಲು ಕೊಡಲು ಪ್ರಾಮಾಣಿಕವಾಗಿ ಸ್ಪಂಧಿಸಿದಾಗ ಮಾತ್ರ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಕಚೇರಿ ಆವರಣದಲ್ಲಿ ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡತನ ನಿವಾರಣೆಯಾಗಿಲ್ಲ. ಶತಮಾನೋತ್ಸವ ಆಚರಿಸುವ ವೇಳೆಗಾದರೂ ದೇಶದ ಜನರು ಸಂಘರ್ಷ ರಹಿತ ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ ಎಂದರು.

ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಕಂಡಿದ್ದು, ಹಂತಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷವಾಗಿ ಆಚರಣೆ ಮಾಡಲು ಕರೆಕೊಟ್ಟು, ನಾಡಿನ ಅನೇಕ ಮಹನೀಯರ ಕೊಡುಗೆ ಸ್ಮರುಸುವಲ್ಲೂ ಸಂಕುಚಿತ ಮನೋಭಾವ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹರ್ ಘರ್ ತಿರಂಗ ಅಂತಾ ಒಂದು ಪಕ್ಷ, ಸ್ವಾತಂತ್ರ್ಯಕ್ಕಾಗಿ ನಡಿಗೆ ಅಂತಾ ಮತ್ತೊಂದು ಪಕ್ಷ ಹೊರಟಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ. ಇಂದಿನ ಕಾಂಗ್ರೆಸ್ ನಕಲಿ ಕಾಂಗ್ರೆಸ್. ಅಂದು ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು, ಹಿರಿಯರು ಬೇರೆ. ಅವರು ತ್ಯಾಗಗಳನ್ನು ಮಾಡಿದ್ದಾರೆ. ಬಿಜೆಪಿ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಇಲ್ಲದೇ ಇರುವುದು ಸರಿಯಲ್ಲ ಎಂದು ಟೀಕಿಸಿದರು.

ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಊಟ, ವಸತಿ ಕೊಡದೇ ಹರ್ ಘರ್ ತಿರಂಗ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಮನೆ ಮನೆ ಮೇಲೆ ಭಾವುಟ ಹಾರಿಸಲು ಕರೆ ಕೊಟ್ಟಿದೀರಾ. ಎಷ್ಟೋ ಜನರಿಗೆ ವಾಸ ಮಾಡಲು ಮನೆ ಇಲ್ಲ. ಫ್ಲೆ ೈ ಓರ್ವಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬೃಹತ್ ರ್ಯಾಲಿಗಳನ್ನು ಮಾಡಿಕೊಂಡು ಹೊರಟಿದ್ದೀರಿ. ನಿಮ್ಮ ರ್ಯಾಲಿಗಳಿಂದ ಜನರ ಹೊಟ್ಟೆ ತುಂಬಲ್ಲ ಎಂದರು.

ಉಚಿತ ಸೌಲಭ್ಯಗಳನ್ನು ಕೊಡೋದು ನಿಲ್ಲಿಸಬೇಕೆಂದು ಪ್ರಧಾನಿಗಳು ಹೇಳುತ್ತಾರೆ. ಆದರೆ, ಎಷ್ಟೋ ಕುಟುಂಬಗಳು, ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಧ್ವಜಾರೋಹಣ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ವಾತಂತ್ರ್ಯ ಸಂದೇಶ ದಲ್ಲಿ ಕುವೆಂಪು ಅವರ ಕವನ ಕೇಳಿ ಸಂತೋಷ ಆಯಿತು. ಭಾರತ ಜನನಿಯ ತನುಜಾತೆ ಕನ್ನಡಾಂಬೆಗೆ ಆಗುತ್ತಿರುವ ಅನ್ಯಾಯವನ್ನು ಕುಮಾರಸ್ವಾಮಿ ಸರಿಪಡಿಸಿ ಹಸಿವು ಮುಕ್ತ, ಬಡತನ ಮುಕ್ತ ಕರ್ನಾಟಕವನ್ನಾಗಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1995ರಲ್ಲೇ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದೆ. ಮುಖ್ಯಮಂತ್ರಿಯಾಗಿ ದೇವೇಗೌಡರು ಧ್ವಜಾರೋಹಣ ಮಾಡಿದರು. ಮುಂದಿನ ಬಾರೀ ನಾನು ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಧ್ವಜಾರೋಹಣ ಮಾಡುತ್ತಾರೆ.

ಮುಂದಿನ ಆಗಸ್ಟ್ 15 ರವೇಳೆಗೆ ಕರ್ನಾಟಕದಲ್ಲಿ ಜೆಡಿಎಸ್ ಆಡಳಿತಕ್ಕೆ ಬರುತ್ತದೆ ಎಂದರು. ಮಾಜಿ ಸಚಿವ ಎನ್.ಎಂ.ನಬಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ಬೆಂಗಳೂರು ಮಹಾನಗರ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article