ಬೆಂಗಳೂರು,ಆ.2-ರಾಜ್ಯದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.
ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಮಂಗಳೂರು, ಉಡುಪಿ, ಕಾರವಾರ(ಭಟ್ಕಳ), ಮಡಿಕೇರಿ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕೆಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರ ಗುಪ್ತಚರ ವಿಭಾಗವು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದು, ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿ ಕುಳಿತಿವೆ. ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಗುಪ್ತಚರ ವಿಭಾಗ, ಆಂತರಿಕ ಭದ್ರತೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಗೃಹ ಇಲಾಖೆಯು ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗಳ ಪರ ಒಲವು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಬಂಧಿಸಿದ್ದ ಕಾಶ್ಮೀರದ ಉಗ್ರ ಹಾಗೂ ಕಳೆದ ಭಾನುವಾರ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ನಡೆಸಿದ ದಾಳಿ ವೇಳೆ ಕೆಲವು ಶಂಕಿತರನ್ನು ವಿಚಾರಣೆಗೊಳಪಡಿಸಿತ್ತು.
ಈ ವೇಳೆ ಕಾಶ್ಮೀರ, ಜಮ್ಮು, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ ಮತ್ತಿತರ ಕಡೆ ಕೆಲವು ಶಂಕಿತರು ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಬೀಡುಬಿಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಸಿದೆ.
ವಿಶೇಷವಾಗಿ ಯುಎಎ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಆಗಮಿಸುವ ಪ್ರಜೆಗಳ ಮೇಲೆ ಕಣ್ಣಿಡಬೇಕು. ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಬೇಕು. ಅವರು ಯಾವ ಕಾರಣಕ್ಕಾಗಿ ಬಂದಿದ್ದಾರೆ, ಎಲ್ಲಿ ವಾಸ್ತವ್ಯ ಹೂಡಲಿದ್ದಾರೆ, ಕರ್ತವ್ಯ ನಿರ್ವಹಿಸುವ ಸ್ಥಳ ಸೇರಿದಂತೆ ಇಂಚಿಂಚು ಮಾಹಿತಿ ಕಲೆ ಹಾಕುವಂತೆ ಸೂಚಿಸಿದೆ.
ಅಲ್ಲದೆ ವಿಮಾನ ನಿಲ್ದಾಣ, ಬಂದರು ಸೇರಿದಂತೆ ಮತ್ತಿತರ ಕಡೆ ಹದ್ದಿನ ಕಣ್ಣಿಡಬೇಕು, ಯಾವುದೇ ವ್ಯಕ್ತಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರೆ ತಕ್ಷಣವೇ ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸುವಂತೆ ಸಲಹೆ ಮಾಡಿದೆ.
ಕರ್ನಾಟಕದ ಪ್ರಮುಖ ಸ್ಥಳಗಳಾದ ವಿಧಾನಸೌಧ, ಹೈಕೋರ್ಟ್, ವಿಕಾಸಸೌಧ, ಉದ್ಯೋಗ ಸೌಧ, ಮುಖ್ಯಮಂತ್ರಿಗಳ ನಿವಾಸ, ರಾಜಭವನ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಟ್ರೋರೈಲ್ವೆ ನಿಲ್ದಾಣ, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು, ಐಟಿಬಿಟಿ ಕಂಪನಿಗಳು, ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಕೆಆರ್‍ಎಸ್, ತುಂಗಭದ್ರ, ಭದ್ರಾ, ಹಾರಂಗಿ, ಕಬಿನಿ ಸೇರಿದಂತೆ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಲ್ಲೂ ಭದ್ರತೆ ಹೆಚ್ಚಿಸಬೇಕೆಂದು ಗೃಹ ಇಲಾಖೆ ಸೂಚನೆ ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹಿರಿಯ ಪೆಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಭದ್ರತೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಯಾವುದೇ ಕಾರಣಕ್ಕೂ ಭದ್ರತೆಯಲ್ಲಿ ಒಂದಿಷ್ಟು ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.