ನಮ್ಮ ಮೆಟ್ರೋದಲ್ಲಿ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣ..!

Social Share

ಬೆಂಗಳೂರು,ಆ.16- ನಿನ್ನೆ ಒಂದೇ ದಿನ ಮೆಟ್ರೋ ರೈಲಿನಲ್ಲಿ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ನಿನ್ನೆ ಒಂದೇ ದಿನ ಮೆಟ್ರೋ ರೈಲು ಸಂಚಾರಕ್ಕೆ ಜನಸಾಗರವೇ ಹರಿದುಬಂದಿದೆ.

ಪೇಪರ್ ಟಿಕೆಟ್ ಪಡೆದಿರುವ ಪ್ರಯಾಣಿಕರ ಟಿಕೆಟ್ ಕೌಂಟಿಂಗ್ ಇನ್ನು ನಡೆಯುತ್ತಿದ್ದು, ಲೆಕ್ಕಾಚಾರ ಮುಗಿದ ಮೇಲೆ ಪ್ರಯಾಣಿಕರ ಸ್ಪಷ್ಟ ಸಂಖ್ಯೆ ತಿಳಿದುಬರಲಿದೆ. ಮೆಟ್ರೋ ಮೂಲಗಳ ಪ್ರಕಾರ ನಿನ್ನೆ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಜಾಥಾ ನಡೆಸಿದ್ದ ಕಾಂಗ್ರೆಸ್ ಪಕ್ಷದವರು ಅತಿ ಹೆಚ್ಚಿನ ಪೇಪರ್ ಟಿಕೆಟ್ ಖರೀದಿಸಿತ್ತು. ಹೀಗಾಗಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದರೂ ಇದರ ಜೊತೆಗೆ ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ ನಿನ್ನೆಯೇ ಅಂತ್ಯಗೊಳ್ಳಲಿದ್ದ ಹಿನ್ನಲೆಯಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಭರ್ಜರಿ ರೆಸ್ಪಾನ್ಸ್ ಕಂಡು ಬಂದಿದೆ.

ಮೆಟ್ರೋ ರೈಲು ಸಂಚಾರ ಆರಂಭಗೊಂಡ ದಿನದಿಂದಲೂ ಇಷ್ಟೊಂದು ಪ್ರಮಾಣದ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿಲ್ಲ ಎನ್ನುವುದು ವಿಶೇಷವಾಗಿದೆ.

ವಿವಾದ ಮೈಮೇಲೆ ಎಳೆದುಕೊಂಡ ಮೆಟ್ರೋ: ಒಂದು ಕಡೆ ಭರ್ಜರಿ ರೆಸ್ಪಾನ್ಸ್ ಖುಷಿಯಲ್ಲಿರುವ ಮೆಟ್ರೋ ಅಧಿಕಾರಿಗಳು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೆಟ್ರೋ ರೈಲು ನಿಲ್ದಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಾಕಲಾಗಿದ್ದು, ಹೋರಾಟಗಾರರ ಜೊತೆಗೆ ವೀರ ಸಾವರ್ಕರ್ ಭಾವಚಿತ್ರವಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸಾವರ್ಕರ್ ಫೋಟೋ ಹಾಕಿರುವ ಬಿಎಂಆರ್‍ಸಿಎಲ್ ನಿರ್ಧಾರಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಸ್ವರ ಎತ್ತಿದ್ದಾರೆ. ಸಾವರ್ಕರ್ ಯಾರು? ಅವರ ಕೊಡುಗೆ ಏನು? ಬ್ರಿಟಿಷರ ಕ್ಷಮೆ ಕೇಳಿದ ಸಾವರ್ಕರ್‍ಗೆ ನಾವೇಕೆ ಗೌರವ ಕೊಡಬೇಕು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾವರ್ಕರ್ ಭಾವಚಿತ್ರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಾವರ್ಕರ್ ಭಾವಚಿತ್ರದ ಬದಲು ಚಿನ್ನಾ ಅವರ ಫೋಟೋ ಹಾಕಬೇಕಿತ್ತ ಎಂದು ಪ್ರಶ್ನಿಸಿದ್ದಾರೆ. ನಮ್ಮ ದೇಶದ ಸಂಸತ್ ಭವನದಲ್ಲೂ ಸಾವರ್ಕರ್ ಅವರ ಭಾವಚಿತ್ರವಿದೆ. ನಿಮಗೆ ಅದನ್ನು ತೆಗಿಸೊ ತಾಕತ್ತು ಇದ್ಯಾ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಒಟ್ಟಾರೆ, ಮೆಟ್ರೋ ರೈಲು ನಿಲ್ದಾಣದಲ್ಲಿ ಹಾಕಿರುವ ಸಾವರ್ಕರ್ ಭಾವಚಿತ್ರ ವಿವಾದ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದ ಜೊರಾಗಿ ನಡೆಯುತ್ತಿರುವುದಂತೂ ಸತ್ಯ.

Articles You Might Like

Share This Article