ನವದೆಹಲಿ, ಆ.6- ಸಿದ್ದರಾಮೋತ್ಸವದ ಅಭೂತಪೂರ್ವ ಯಶಸ್ಸಿನ ಬಳಿಕ ಕಾಂಗ್ರೆಸ್ ತಿರಂಗ ಯಾತ್ರೆಗೆ ಚಾಲನೆ ನೀಡಿದ್ದು, ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಮಂದಿ ಸಮಾವೇಶಗೊಂಡು ಪಾದಯಾತ್ರೆ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ನಗರದ ಮೆಜೆಸ್ಟಿಕ್‍ನಲ್ಲಿರುವ ಸಂಗೋಳ್ಳಿ ರಾಯಣ್ಣ ಪ್ರತಿಮೆಯಿಂದ ಸ್ವಾತಂತ್ರ್ಯ ನಡಿಗೆ ಆರಂಭಗೊಂಡು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.
ಸುಮಾರು ಒಂದು ಲಕ್ಷ ಮಂದಿ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರಷ್ಟೆ ಅಲ್ಲದೆ ಸ್ವಯಂ ಸೇವಾಸಂಸ್ಥೆಗಳು, ಚಲನಚಿತ್ರರಂಗ, ಸಾಂಸ್ಕøತಿಕ ಕ್ಷೇತ್ರದಲ್ಲಿರುವವರು, ಸಾಹಿತಿಗಳು, ಪ್ರಗತಿಪರರಿಗೆ ಸ್ವತಂತ್ರ ನಡಿಗೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.
ಅಜಾದಿ ಕಾ ಅಮೃತ್ ಮಹೋತ್ಸವದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟವನ್ನು ಹೈಜಾಕ್ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾದರೂ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್ ಅಪರಿಚಿತವಾಗಿ ಉಳಿಯುವಂತಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು.
ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ್ ಶಿವಿರ್‍ನಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‍ನ ಪಾತ್ರ, ಸಹಭಾಗಿತ್ವ, ತ್ಯಾಗ-ಬಲಿದಾನಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನಿರ್ಣಯಿಸಲಾಗಿತ್ತು.
ಅದರ ಪ್ರಕಾರ ದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ತಲಾ 75 ಕಿಲೋ ಮೀಟರ್ ತಿರಂಗ ಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಅದರ ಪ್ರಕಾರ ಆಗಸ್ಟ್ 1ರಿಂದಲೇ ಯಾತ್ರೆಗಳು ಕೆಲವು ಕಡೆಗಳಲ್ಲಿ ಆರಂಭಗೊಂಡಿವೆ. ರಾಜಧಾನಿ ಕೇಂದ್ರ ಸ್ಥಾನದಲ್ಲಿ ಆಗಸ್ಟ್ 15ರಂದು ಬೃಹತ್ ಸಮಾವೇಶ ಮತ್ತು ಪಾದಯಾತ್ರೆಯನ್ನು ಸಂಯೋಜಿಸಲಾಗಿದೆ.
Koo Appಕೆಪಿಸಿಸಿ ಅಧ್ಯಕ್ಷರಾದ @dkshivakumar_official ಸ್ವಾತಂತ್ರ್ಯ ನಡಿಗೆ ಜಾರಿ ಸಮಿತಿ ಅಧ್ಯಕ್ಷರಾದ ಡಾ.ಜಿ ಪರಮೇಶ್ವರ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸ್ವಾತಂತ್ರ್ಯ ನಡಿಗೆ ಸಂಬಂಧ ಸಭೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ನಡಿಗೆ ಟಿ ಶರ್ಟ್ ಮತ್ತು ಕ್ಯಾಪ್ ಅನಾವರಣ ಗೊಳಿಸಲಾಯಿತು.– ಕರ್ನಾಟಕ ಕಾಂಗ್ರೆಸ್ (@inckarnataka) 6 Aug 2022
ಅದರ ಪ್ರಕಾರ ರಾಜ್ಯದ 224 ಕ್ಷೇತ್ರಗಳಲ್ಲೂ ಅಭಿಯಾನಗಳು ಆರಂಭಗೊಳ್ಳಬೇಕಿತ್ತು. ಆಗಸ್ಟ್ 3ರಂದು ಸಿದ್ದರಾಮೋತ್ಸವದ ತಯಾರಿ ಅಂಗವಾಗಿ ಕಾರ್ಯಕರ್ತರು ತಿರಂಗೋತ್ಸವವನ್ನು ಮುಂದೂಡಿದ್ದರು. ಸಿದ್ದರಾಮೋತ್ಸವದ ಯಶಸ್ಸಿನ ಬಳಿಕ ಈಗ ಕ್ಷೇತ್ರಗಳ ಮಟ್ಟದಲ್ಲಿ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಲಾಗಿದೆ.
ಕಾರ್ಯಕರ್ತರು ಮತ್ತು ಮುಖಂಡರನ್ನು ಹುರಿದುಂಬಿಸಲು ಪ್ರತಿಪಕ್ಷದ ನಾಯಕರು ಸೇರಿದಂತೆ ಎಲ್ಲಾ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ಕ್ಷೇತ್ರ ಮಟ್ಟದ ಪಾದಯಾತ್ರೆಯ ಉಸ್ತುವಾರಿಗೆ ಈಗಾಗಲೇ ಪ್ರಮುಖ ನಾಯಕರು ಹಾಗೂ ಪದಾಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದು, ಸ್ವಾತಂತ್ರ್ಯ ಬಂದು ಆಗಸ್ಟ್ 15ಕ್ಕೆ 75 ವರ್ಷ ತುಂಬಲಿದೆ. ಅದರ ಅಂಗವಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ಸ್ವಾತಂತ್ರ್ಯ ನಡಿಗೆ ಎಂಬ ಅಭಿಯಾನ ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿಜೀ ನೇತೃತ್ವದಲ್ಲಿ ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್ ಆಯೋಜಿಸಿರುವ ಪಾದಯಾತ್ರೆಯಲ್ಲಿ ಲಕ್ಷಾಂತರ ಜನ ಭಾವಹಿಸುತ್ತಿದ್ದಾರೆ. ಇದರಲ್ಲಿ ನೀವು ಭಾಗವಹಿಸಿ ಎಂದು ಕರೆ ನೀಡಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಈ ಬಾರಿ ಸ್ವಾತಂತ್ರ್ಯದ ದಿನ ಪವಿತ್ರವಾಗಿದೆ. 75 ವರ್ಷ ಪೂರ್ಣಗೊಳ್ಳುತ್ತಿದೆ. ಸೋನಿಯಾ ಗಾಂಧಿ ಮನವಿಯಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ತಿರಂಗ ಯಾತ್ರೆ ನಡೆಸಲಾಗುತ್ತಿದೆ. ಬಳಿಕ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಒಂದು ಲಕ್ಷ ಜನ ತಿರಂಗ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಎಲ್ಲರೂ ಭಾಗವಹಿಸಿ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಸಕ್ರಿಯವಾಗಿರಲು ಚುನಾವಣೆಗೆ ಸಜ್ಜುಗೊಳ್ಳಲು, ಸ್ವಾತಂತ್ರ್ಯ ತಂದುಕೊಟ್ಟ ಯಶಸ್ಸನ್ನು ತನ್ನಲ್ಲೆ ಉಳಿಸಿಕೊಳ್ಳಲು ಯತ್ನಿಸುತ್ತಿದೆ.