ನವದೆಹಲಿ,ಫೆ.17- ದೇಶದಲ್ಲಿ ಹೊಸದಾಗಿ 30,757 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 4,27,54,315ಕ್ಕೇರಿದೆ. ಚೇತರಿಕೆಯ ದರ ಪುನಃ 98 ಪ್ರತಿಶತದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ 541 ಜನರು ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್-19 ಮರಣಗಳ ಸಂಖ್ಯೆ 5,10,413ಕ್ಕೆ ಏರಿಕೆಯಾಗಿದೆ.
ಸತತ 11 ದಿನಗಳಿಂದ ದೈನಿಕ ಕೋವಿಡ್-19 ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿವೆ.
ಸಕ್ರಿಯ ಪ್ರಕರಣಗಳು 3,32,918ಕ್ಕೆ ಇಳಿದಿದ್ದು, ಒಟ್ಟಾರೆ ಸೋಂಕಿನ ಪ್ರಕರಣಗಳ 0.78 ಪ್ರತಿಶತದಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ.98.03ಕ್ಕೆ ಸುಧಾರಣೆ ಕಂಡಿದೆ. ಕಡೆಯ ಬಾರಿ ಕೋವಿಡ್ ಚೇತರಿಕೆ ಪ್ರಮಾಣ ಜ.5ರಂದು 98 ಪ್ರತಿಶತ ದಾಟಿತ್ತು. ಅಂದು ಈ ದರವು ಶೇ.98.01ರಷ್ಟಿತ್ತು.
ಕಳೆದ 24 ಗಂಟೆಗಳ ಅವಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,322ರಷ್ಟು ಇಳಿಕೆ ಕಂಡಿದೆ. ದೈನಿಕ ಪಾಸಿಟಿವಿಟಿ ದರ ಶೇ.2.61ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.3.04ರಷ್ಟು ದಾಖಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್‍ನಿಂದ ಗುಣಮುಖರಾದವರ ಪ್ರಮಾಣ 4,19,10,984ಕ್ಕೆ ಏರಿಕೆಯಾಗಿದೆ. ಕೋವಿಡ್ ಮರಣಗಳ ಪ್ರಮಾಣ ಶೇ.1.19ರಷ್ಟು ದಾಖಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದಡಿ ದೇಶದಲ್ಲಿ ಹಾಕಲಾಗಿರುವ ಲಸಿಕೆಗಳ ಪ್ರಮಾಣ 174.24 ಕೋಟಿ ಡೋಸ್‍ಗಳನ್ನು ದಾಟಿದೆ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.
