ದಶಕದ ಅಂತ್ಯಕ್ಕೆ 6ಜಿ ಸೇವೆ ಲಭ್ಯ : ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಮೇ 17- ಈ ದಶಕದ ಅಂತ್ಯದ ವೇಳೆಗೆ ದೇಶದಲ್ಲಿ 6ಜಿ ಟೆಲಿಕಾಂ ನೆಟ್ವರ್ಕ್ ಸೇವೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟೆಲಿಕಾಂ ಕ್ಷೇತ್ರದ ನಿಯಂತ್ರಕ ಸಂಸ್ಥೆ ಟ್ರಾಯ್ನ ಬೆಳ್ಳಿಮಹೋತ್ಸವದಲ್ಲಿ ಮಾತನಾಡಿದ ಪ್ರಧಾನಿಯವರು, ಅಲ್ಟ್ರಾ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕದ 6ಜಿ ಸೇವೆ ಆರಂಭಕ್ಕೆ ಈಗಾಗಲೇ ಟಾಸ್ಕ್ಫೋರ್ಸ್ ರಚಿಸಲಾಗಿದೆ ಎಂದರು.
ಭಾರತ ಪ್ರಸ್ತುತ 3ಜಿ, 4ಜಿ ಟೆಲಿಕಾಂ ನೆಟ್ವರ್ಕ್ ಸೇವೆ ಬಳಸುತ್ತಿದೆ. ಮುಂದಿನ ಕೆಲವೇ ತಿಂಗಳಲ್ಲಿ 5ಜಿ ನೆಟ್ವರ್ಕ್ ಸೇವೆಯನ್ನು ಕೆಲವು ಕಂಪೆನಿಗಳು ಆರಂಭಿಸಲಿವೆ. ಇದು ಸುಮಾರು 450 ಬಿಲಿಯನ್ ಡಾಲರ್ ವಹಿವಾಟನ್ನು ಭಾರತೀಯ ಆರ್ಥಿಕತೆಗೆ ಸೇರ್ಪಡೆ ಮಾಡಲಿದೆ ಎಂದು ಹೇಳಿದರು.
5ಜಿ ನೆಟ್ವರ್ಕ್ ಕೇವಲ ಇಂಟರ್ನೆಟ್ ವೇಗವನ್ನು ಹೆಚ್ಚಿಸುವುದಷ್ಟೇ ಅಲ್ಲ. ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಆಡಳಿತ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ಸುಲಭ ಜೀವನ ಮತ್ತು ಸರಳ ವ್ಯವಹಾರಿಕ ಸೌಲಭ್ಯಗಳನ್ನು ಕಲ್ಪಿಸಲಿದೆ. ಕೃಷಿ, ಆರೋಗ್ಯ, ಶಿಕ್ಷಣ, ಮೂಲ ಸೌಲಭ್ಯ, ಸರಕು ಸಾಗಾಣಿಕೆ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ ಎಂದರು.
ಈ ಹಿಂದಿನ ಯುಪಿಎ ಸರ್ಕಾರದ 2ಜಿ ಯುಗದಲ್ಲಿ ನೀತಿಗಳು ಪಾಶ್ರ್ವವಾಯು ಪೀಡಿತವಾಗಿದ್ದವು ಮತ್ತು ಭ್ರಷ್ಟಾಚಾರ ಹೆಚ್ಚಾಗಿತ್ತು. ಈಗ ತಮ್ಮ ಸರ್ಕಾರ 4ಜಿ ಮತ್ತು 5ಜಿಯಲ್ಲಿ ಪಾರದರ್ಶಕತೆ ಅನುಸರಿಸುತ್ತಿದೆ. ಇಂಟರ್ನೆಟ್ ಮತ್ತು ಟೆಲಿ ಸಂಪರ್ಕಗಳ ಬಳಕೆದಾರರ ವೇಗ ವಿಸ್ತರಣೆಗೊಂಡಿದೆ ಎಂದು ವಿವರಿಸಿದರು.
ಭಾರತ ಜಗತ್ತಿನಲ್ಲೇ ದೊಡ್ಡ ಮೊಬೈಲ್ ಉತ್ಪಾದಕ ವಲಯವಾಗಿ ಮುನ್ನುಗ್ಗುತ್ತಿದೆ. 2ರಿಂದ 200ರವರೆಗೆ ಉತ್ಪಾದಕ ಘಟಕಗಳು ವಿಸ್ತರಣೆಗೊಂಡಿವೆ. ಸರ್ಕಾರ ಆರೋಗ್ಯಕರ ಪೈಪೋಟಿಯನ್ನು ಬೆಂಬಲಿಸುತ್ತಿದೆ. ಪ್ರಸ್ತುತ ಭಾರತ ವಿಶ್ವದಲ್ಲೇ ಅತಿ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ಪಡೆಯುವ ದೇಶವಾಗಿದೆ ಎಂದರು.
5ಜಿ ನೆಟ್ವರ್ಕ್ನಲ್ಲಿ ದೇಶೀನಿರ್ಮಿತ ಪರೀಕ್ಷಾ ಹಾಸಿಗೆ (ಟೆಸ್ಟ್ ಬೆಡ್) ನವೋದ್ಯಮಗಳಿಗೆ ಪ್ರಧಾನಿ ಚಾಲನೆ ನೀಡಿದರು. ಈ ಮೊದಲು ಮೊಬೈಲ್ ಇಂಟರ್ನೆಟ್ ಸೇವೆಗಳ ಪ್ರತಿಷ್ಠಾಪನೆಯ ಟೆಸ್ಟ್ಬೆಡ್ಗಳಿಗಾಗಿ ವಿದೇಶಗಳನ್ನು ಅವಲಂಬಿಸಬೇಕಾಯಿತು. ಈಗ ದೇಶೀಯವಾಗಿಯೇ ಇವುಗಳ ನಿರ್ಮಾಣವಾಗುತ್ತಿದೆ.
ಸುಮಾರು 220 ಕೋಟಿ ರೂ.ಗಳ ವಹಿವಾಟು ನಿರೀಕ್ಷಿಸಲಾಗಿದೆ. ಯುವ ಮಿತ್ರರು, ಸಂಶೋಧಕರು, ಖಾಸಗಿ ಕಂಪೆನಿಗಳು ಟೆಸ್ಟ್ ಬೆಡ್ಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಮದ್ರಾಸ್ನ ಐಐಟಿ ನೇತೃತ್ವದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ದೆಹಲಿ, ಹೈದರಾಬಾದ್, ಬಾಂಬೆ ಐಐಟಿಗಳು ಹಾಗೂ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜನಿಯರಿಂಗ್ ಮತ್ತು ರೀಸರ್ಚ್ ಸಂಸ್ಥೆ, ಸೆಂಟರ್ ಆಫ್ ಎಕ್ಸಲೆನ್ಸಿ ಇನ್ ವೈರ್ಲೆಸ್ ಟೆಕ್ನಾಲಜಿ ಸಂಸ್ಥೆಗಳು ಸೆಟ್ಬೆಡ್ಗಳ ಸೌಲಭ್ಯವನ್ನು ಅಭಿವೃದ್ಧಿಪಡಿಸುತ್ತಿದ್ದು, ದೇಶದ ಐದು ಪ್ರತ್ಯೇಕ ಸ್ಥಳಗಳಲ್ಲಿ ಲಭ್ಯವಾಗಲಿದೆ ಎಂದು ಮೋದಿ ಹೇಳಿದರು.