ಏಷ್ಯಾಕಪ್ ಫೈನಲ್‍ಗೇರಿದ ಭಾರತ ವನಿತೆಯರು

Social Share

ಸಿಲ್ಹೆಟ್, ಏ. 13- ಭಾರತ ತಂಡದ ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ( 42 ರನ್, 1 ವಿಕೆಟ್) ರ ಹೋರಾಟದ ಫಲದಿಂದಾಗಿ ಏಷ್ಯಾ ಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ 74 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಹರ್ಮನ್‍ಪ್ರೀತ್ ಕೌರ್ ಪಡೆ ಫೈನಲ್‍ಗೆ ಪ್ರವೇಶಿಸಿದೆ.

ಟಾಸ್ ಗೆದ್ದರೂ ಎದುರಾಳಿ ಪಡೆಯನ್ನು ಬ್ಯಾಟಿಂಗ್‍ಗೆ ಆಮಂತ್ರಿಸಿದ ಥೈಯ್ಲಾಂಡ್‍ನ ನಾಯಕಿ ನೂರೆಮೋಲ್ ಚಾಯ್‍ವಾಲ್ ಅವರ ನಿರ್ಣಯ ತಪ್ಪು ಎಂಬುದನ್ನು ಮಹಿಳಾ ಬ್ಯಾಟರ್‍ಗಳು ಆರಂಭದಲ್ಲಿ ತೋರಿಸಿದರು.
ಭಾರತದ ಪರ ಆರಂಭಿಕ ಆಟಗಾರ್ತಿಯರಾಗಿ ಕ್ರೀಸ್ಗೆ ಇಳಿದ ಶೆಫಾಲಿ ವರ್ಮಾ (42 ರನ್, 5 ಬೌಂಡರಿ, 1 ಸಿಕ್ಸರ್) ಹಾಗೂ ಸ್ಮೃತಿ ಮಂದಾನಾ (13 ರನ್, 3 ಬೌಂಡರಿ) ಮೊದಲ ವಿಕೆಟ್‍ಗೆ 38 ರನ್‍ಗಳ ಕಾಣಿಕೆ ನೀಡಿದರು.

ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಾಯಾ ಅವರು ಯಶಸ್ವಿಯಾದರು. 4.3 ನೆ ಓವರ್‍ನಲ್ಲಿ ಮಾಯಾ ಎಸೆದ ಚೆಂಡಿನ ಗತಿಯನ್ನು ಅರಿಯದ ಸ್ಮೃತಿ ಮಂದಾನಾ ಅವರು ಕಾಮ್‍ಚೊಪುಗೆ ಕ್ಯಾಚ್ ನೀಡಿ ಮೈದಾನ ತೊರೆದರು.
ನಂತರ ಬಂದ ಜೆಮಿ ರೋಡಿರ್ಗಸ್ ( 27 ರನ್, 3 ಬೌಂಡರಿ) ಹಾಗೂ ನಾಯಕಿ ಹರ್ಮನ್‍ಪ್ರೀತ್ ಕೌರ್ ( 36 ರನ್, 4 ಬೌಂಡರಿ) ಅವರ ತಾಳ್ಮೆಯುತ ಆಟದಿಂದಾಗಿ ನಿಗತ 20 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು ಭಾರತ ವನಿತೆಯರು 148 ರನ್‍ಗಳನ್ನು ಗಳಿಸಿದರು.

ದೀಪ್ತಿ ಶರ್ಮಾ ಮೋಡಿ:
ಭಾರತ ವನಿತೆಯರು ನೀಡಿದ 149 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಥ್ಲಾಯೆಂಡ್ ಪಡೆಯು ದೀಪ್ತಿ ಶರ್ಮಾ (3 ವಿಕೆಟ್) ಹಾಗೂ ರಾಜೇಶ್ವರಿ ಗಾಯಕ್ವಾಡ್ (2 ವಿಕೆಟ್)ರ ಬೌಲಿಂಗ್ ಮೋಡಿಗೆ ಶರಣಾಗಿ 74 ರನ್‍ಗಳಿಗೆ ಸರ್ವಪತನಗೊಂಡು 74 ರನ್‍ಗಳಿಂದ ಸೋಲು ಕಂಡು ಫೈನಲ್‍ನಿಂದ ಹೊರಬಿದ್ದಿತ್ತು.

ಥ್ಲಾಯೆಂಡ್ ಪರವಾಗಿ ನಾಯಕಿ ನೂರೆಮೋಲ್ ಚಾಯ್‍ವಾಲ್ ಹಾಗೂ ನಟಾಯ ಅವರು ತಲಾ 21 ರನ್‍ಗಳನ್ನು ಬಾರಿಸಿದರೆ ಉಳಿದ ಆಟಗಾರ್ತಿಯರು ಒಂದಂಕಿಯನ್ನು ದಾಟುವಲ್ಲೂ ಎಡವಿದರು. 3 ಆಟಗಾರ್ತಿಯರು ಶೂನ್ಯ ಸುತ್ತಿದರು.

ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಭಾರತ ತಂಡವು ಫೈನಲ್‍ನಲ್ಲಿ ಶ್ರೀಲಂಕಾ ಅಥವಾ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

Articles You Might Like

Share This Article