ನವದೆಹಲಿ,ಜ.26- ದೇಶದ 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಸಮಾರಂಭದಲ್ಲಿ ವೇಳೆ ದೇಶದ ಸೇನಾ ಸಾಮರ್ಥ್ಯ ಮತ್ತು ಭವ್ಯ ಪರಂಪರೆ , ದೇಶ ಸಂಸ್ಕೃತಿ ಅನಾವರಣಗೊಂಡಿತು. ಬೆಳಗ್ಗೆ 10.30ಕ್ಕೆ ಸರಿಯಾಗಿ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು.
ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಆರಂಭವಾಯಿತು. ರಾಜಪಥವು ಕರ್ತವ್ಯ ಪಥ ಎಂದು ಮರು ನಾಮಕರಣಗೊಂಡ ನಂತರ ನಡೆಯುತ್ತಿರುವ ಮೂರನೇ ಗಣರಾಜ್ಯೋತ್ಸವ ಇದಾಗಿದೆ.ಸೇನಾ ಪರೇಡ್‌ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್ ಯೋಧರು, ಒಬ್ಬ ಅಶೋಕ ಚಕ್ರ ಪುರಸ್ಕೃತರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಪರೇಡ್ ಮೂಲಕ ವಿಶ್ವದ ಮುಂದೆ ದೇಶದ ಮಿಲಿಟರಿ ಶಕ್ತಿ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸೊಬಿಯಾಂಟೊ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ರಾಷ್ಟ್ರೀಯ ಯುದ್ಧ ಸಾರಕಕ್ಕೆ ತೆರಳಿ ಮಡಿದ ವೀರರಿಗೆ ಗೌರವ ವಂದನೆ ಸಲ್ಲಿಸಿದರು. ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪ್ರಧಾನಿ ಹಾಗೂ ಇತರ ಗಣ್ಯರು ಕರ್ತವ್ಯಪಥಕ್ಕೆ ಆಗಮಿಸಿದರು.ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸುವರ್ಣ ಭಾರತ, ದೇಶದ ಪರಂಪರೆ, ಸಂಸ್ಕೃತಿಗೆ ವಿಶೇಷ ಒತ್ತು ನೀಡಲಾಗಿತ್ತು. ಮೆರವಣಿಗೆ ವೀಕ್ಷಿಸಲು 10 ಸಾವಿರ ಗಣ್ಯರು ಆಗಮಿಸಿದ್ದರೆ, 5 ಸಾವಿರ ಕಲಾವಿದರಿಂದ ದೇಶದ ಪರಂಪರೆಯನ್ನು ಅನಾವರಣಗೊಳಿಸಲಾಯಿತು.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 16 ಕೋಷ್ಟಕಗಳು, 15 ಟಾಬ್ಲೆಕ್ಸ್ ಸೇರಿದಂತೆ ಒಟ್ಟು 31 ಕೋಷ್ಟಕಗಳು ಭಾಗವಹಿಸಿದ್ದವು. ಸ್ವರ್ಣಿಮ್ ಭಾರತ್ ವೀರಸಾತ್ ಔರ್ ವಿಕಾಸ್ ಎಂಬುದು ಈ ಬಾರಿಯ ಥೀಮ್ ಆಗಿತ್ತು. ಬ್ರಹೋಸ್ ಕ್ಷಿಪಣಿ, ಪಿನಾಕ ರಾಕೆಟ್ ವ್ಯವಸ್ಥೆ, ಆಕಾಶ್ ವಾಯು ರಕ್ಷಣಾ ಸೇರಿದಂತೆ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳು ನೋಡುಗರ ಕಣನಸೆಳೆದವು.
ಸೇನೆಯ ಯುದ್ಧ ಕಣ್ಗಾವಲು ವ್ಯವಸ್ಥೆ ಹೊಂದಿರುವ ಸಂಜಯ್ ಡಿಆರ್‌ಡಿಒ ತಯಾರಿಸಿರುವ ಪ್ರಳಯ್ ಯುದ್ಧ ತಂತ್ರದ ಕ್ಷಿಪಣಿ ಕೂಡ ಪ್ರದರ್ಶನಗೊಂಡವು. ಮಿಲಿಟರಿಯ ಟಿ-90 ಭೀಷ ಟ್ಯಾಂಕ್‌ಗಳು , ಷರತ್ ಪದಾತಿ ಸೈನ್ಯದ ವಾಹನಗಳು, ನಾಗ್ ಕ್ಷಿಪಣಿ ವ್ಯವಸ್ಥೆ, ಮೌಂಟೆಡ್ ಪದಾತಿ ದಳದ ಮಾರ್ಟರ್ ಸಿಸ್ಟಮ್ ಕೂಡ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಸೂಪರ್ ಆರ್ಕ್ಯುಲಸ್-ಸಿ-275, ಸಿ-17, ಪಿ-8ಐ, ಮಿಗ್ 29, ಸುಖೋಯ್-30 ಇತರ ಯುದ್ಧ ವಿಮಾನಗಳು ಕೂಡ ಪ್ರದರ್ಶನಗೊಂಡವು. ವಾಯುಪಡೆಯಿಂದ 40 ವಿಮಾನ ಮತ್ತು 3 ಡಾರ್ಮಿರ್ ವಿಮಾನಗಳು ಕೂಡ ಶಕ್ತಿಯನ್ನು ಅನಾವರಣಗೊಳಿಸಿದವು. ವಿಶೇಷವೆಂದರೆ ಕರ್ತವ್ಯ ಪಥದಲ್ಲಿ ನಡೆದ ಸಾಂಪ್ರದಾಯಿಕ ಪರೇಡ್‌ನಲ್ಲಿ ಇಂಡೋನೇಷ್ಯಾದ ಸೇನಾ ತುಕಡಿಗಳೂ ಪಾಲ್ಗೊಂಡಿದ್ದವು.
ಕಟ್ಟೆಚ್ಚರ:
ಗಣರಾಜ್ಯೋತ್ಸವ ಹಿನ್ನೆಲೆ ರಾಜಧಾನಿಯಾದ್ಯಂತ ಅರೆಸೇನಾ ಪಡೆ ಸಿಬ್ಬಂದಿ ಮತ್ತು 70 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೆಹಲಿ ಜಿಲ್ಲೆಯೊಂದರಲ್ಲೇ 15 ಸಾವಿರ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಆರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ವೈಮಾನಿಕ ದಾಳಿಗಳನ್ನು ಪತ್ತೆಹಚ್ಚಲು ಮತ್ತು ಎದುರಿಸಲು ಡ್ರೋನ್ ನಿರೋಧಕ ವ್ಯವಸ್ಥೆ, ಪರೇಡ್ ಮಾರ್ಗದಲ್ಲಿ ಸ್ನೈಫರ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಪರೇಡ್ ನಡೆಯುವ ನವದೆಹಲಿ, ಮಧ್ಯ ದೆಹಲಿ ಮತ್ತು ಉತ್ತರ ದೆಹಲಿ ಜಿಲ್ಲೆಗಳಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಡಿಸಿಪಿ ಅಥವಾ ಹೆಚ್ಚುವರಿ ಡಿಸಿಪಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ವಲಯದ ಉಸ್ತುವಾರಿ ನೋಡಿಕೊಂಡರು.
ಸಂಚಾರ ಪೊಲೀಸರ ಪ್ರಕಾರ, ಪರೇಡ್ ವಿಜಯ ಚೌಕ್, ಕರ್ತವ್ಯ ಪಥ, ಸಿ-ಹೆಕ್ಸಾಗನ್, ಸುಭಾಸ್‌ಚಂದ್ರ ಬೋಸ್ ವೃತ್ತ, ತಿಲಕ್ ಮಾರ್ಗ, ಬಹದ್ದೂರ್ ಶಾ ಜಾಫರ್ ಮಾರ್ಗ, ನೇತಾಜಿ ಸುಭಾಸ್ ಮಾರ್ಗ ಮತ್ತು ಕೆಂಪು ಕೋಟೆಯ ಮೂಲಕ ಸಾಗಲಿದೆ. ರಾಷ್ಟ್ರೀಯ ಯುದ್ಧ ಸಾರಕ, ಇಂಡಿಯಾ ಗೇಟ್‌ನಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಗಣರಾಜ್ಯೋತ್ಸವ ಪರೇಡ್ ಮುಗಿಯುವವರೆಗೆ ಇತರ ರಾಜ್ಯಗಳ ಯಾವುದೇ ಭಾರೀ ಮತ್ತು ಲಘು ಸರಕು ವಾಹನಗಳು ದೆಹಲಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.