ಸಂಸತ್‍ನಲ್ಲಿ ತವಾಂಗ್ ಗದ್ದಲ, ಖಡಕ್ ಉತ್ತರ ಕೊಟ್ಟ ರಾಜನಾಥ್ ಸಿಂಗ್

Social Share

ನವದೆಹಲಿ,ಡಿ.13-ಭಾರತ-ಚೀನಾ ಗಡಿ ಭಾಗ ತವಾಂಗ್ ಸೆಕ್ಟರ್‍ನಲ್ಲಿ ಎರಡು ದೇಶಗಳ ಯೋಧರ ನಡುವಿನ ದೈಹಿಕ ಸಂಘರ್ಷದ ಸಂಸತ್‍ನ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕೆಲ ಕಾಲ ಕಲಾಪ ಮುಂದೂಡಲ್ಪಟ್ಟು ಬಳಿಕ ಉತ್ತರ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ಗಡಿ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಉಭಯ ಸದನಗಳಲ್ಲಿ ಪ್ರತಿಪಕ್ಷದ ಸದಸ್ಯರು ಚೀನಾ, ಭಾರತ ಸಂಘರ್ಷದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.

ಇದಕ್ಕೂ ಮೊದಲು ಪ್ರತಿಪಕ್ಷಗಳ ಸಂಸದರಾದ ರಂಜಿತ್ ರಂಜನ್, ರಣದೀಪ್ ಸುರ್ಜೆವಾಲ, ಎಲ್.ಹನುಮಂತಯ್ಯ, ಜಬೀ ಮಾಥರ್, ಜಜಾನಿ ಪಟೇಲ್, ನಾಸೀರ್ ಹುಸೇನ್, ಮನೀಶ್ ತಿವಾರಿ, ಮನೋಜ್‍ಕುಮಾರ್ ಝಾ, ಚತುರ್ವೇದಿ ಸೇರಿದಂತೆ ಅನೇಕರು ನೋಟಿಸ್ ನೀಡಿದರು.

ಚುನಾವಣೆ ಎದುರಿಸಲು ರಾಜ್ಯ ಬಿಜೆಪಿಯಲ್ಲಿ ವರ್ಚಸ್ವಿ ನಾಯಕನ ಕೊರತೆ

ಪ್ರಶ್ನೋತ್ತರವನ್ನು ಬದಿಗಿಟ್ಟು ಗಡಿ ಸಂಘರ್ಷದ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದವು.
ರಾಜ್ಯ ಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ಸಚಿವ ಪಿಯೂಶ್ ಗೋಯಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲು ಉತ್ತರ ನೀಡುತ್ತಾರೆ. ನಂತರ ಪ್ರಧಾನಿಯವರಿಗೂ ಮಾತನಾಡಲು ಅವಕಾಶ ಕೊಡಬೇಕೆಂದು ಪೀಠಾಧ್ಯಕ್ಷರಿಗೆ ಮನವಿ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ವಿರುದ್ಧ ಹರಿಹಾಯ್ದರು. ಭಾರತದ ಒಂದಿಂಚೂ ನೆಲವು ವಿದೇಶಿ ಆಕ್ರಮಣಕ್ಕೆ ಒಳಗಾಗಿಲ್ಲ. ಯಾರು ಒತ್ತುವರಿ ಮಾಡಿಕೊಡಲು ಬಿಟ್ಟಿಲ್ಲ ಎಂದು ಪ್ರಧಾನಿ ಹೇಳಿದ ಬಳಿಕವೂ, ತವಾಂಗ್ ಸೆಕ್ಟರ್‍ನಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಜೊತೆ ಸಂಘರ್ಷ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದೇಶದ ಗಡಿ ವಿಷಯದಲ್ಲಿ ಜನರನ್ನು ಕತ್ತಲಿನಲ್ಲಿರಿಸಿದೆ. ಇದರಲ್ಲಿ ನಾವು ರಾಜಕೀಯ ಬೆರೆಸಲು ಬಯಸುವುದಿಲ್ಲ. ದೇಶದ ರಕ್ಷಣೆ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾವು ಸರ್ಕಾರದ ಜೊತೆ ಕೈ ಜೋಡಿಸಲು ಸಿದ್ದರಿದ್ದೇವೆ. ಆದರೆ ಪ್ರಧಾನಿಯವರು ಚರ್ಚೆಯ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿದರು.

ಖರ್ಗೆ ಹೆಸರಿಗಷ್ಟೇ ಕಾಂಗ್ರೆಸ್ ಅಧ್ಯಕ್ಷರು, ಈಗಲೂ ಜೀ ಹುಜೂರ್ ಸಂಸ್ಕೃತಿ ಇದೆ : ಬಿಜೆಪಿ ವ್ಯಂಗ್ಯ

ಸಂಸತ್‍ನಲ್ಲಿ ಕೋಲಾಹಲ ನಡೆದ ಬಳಿಕ ಕಲಾಪ ಕೆಲ ಕಾಲ ಮುಂದೂಡಲಾಯಿತು. ನಂತರ ಸದನ ಸಮಾವೇಶಗೊಂಡಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿ.9ರಂದು ಯಾಂಗಷ್ಟೆ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಚೀನಾದ ಪಿಎಲ್‍ಎ ಪಡೆ ಒತ್ತುವರಿ ಮಾಡುವ ಪ್ರಯತ್ನ ನಡೆಸಿದ್ದು, ಈ ಸವಾಲನ್ನು ನಮ್ಮ ಭಾರತೀಯ ಪಡೆಗಳು ಸಮರ್ಥವಾಗಿ ನಿರ್ಣಯಿಸಿದೆ ಎಂದು ಹೇಳೀದರು.

ಧೈರ್ಯದಿಂದ ನಮ್ಮ ಗಡಿಯನ್ನು ರಕ್ಷಣೆ ಮಾಡಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿವೆ. ಭಾರತೀಯ ಯೋಧರ ಪ್ರತಿರೋಧದಿಂದ ಪಿಎಂಎಲ್ ಯೋಧರು ತಮ್ಮ ಸ್ವಸ್ಥಾನಗಳಿಗೆ ವಾಪಸ್ಸಾಗಿದ್ದಾರೆ ಎಂದರು.

ಈ ವಿಚಾರವನ್ನು ರಾಜತಾಂತ್ರಿಕ ಮಾರ್ಗದಲ್ಲಿ ಚೀನಾದೊಂದಿಗೆ ವ್ಯವಹಿರಿಸಲಾಗುವುದು. ನಮ್ಮ ಸೇನಾ ಪಡೆ ಗಡಿ ರಕ್ಷಣೆಗೆ ಮತ್ತು ಯಾವುದೇ ಆಕ್ರಮಣದ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ಸಾಮಥ್ರ್ಯ ಮತ್ತು ಸಿದ್ದತೆ ಹೊಂದಿದೆ. ದೇಶದ ಸಾರ್ವಭೌಮತೆಯನ್ನು ರಕ್ಷಣೆ ಮಾಡುವ ವಿಷಯದಲ್ಲಿ ಈ ಸಂಸತ್‍ಗೆ ಸ್ಪಷ್ಟ ಭರವಸೆ ನೀಡುತ್ತೇನೆ ಎಂದರು.

ಎರಡು ದೇಶಗಳ ಮುಖಾಮುಖಿಯಲ್ಲಿ ಉಭಯ ದೇಶಗಳ ಸೈನಿಕರಿಗೆ ಗಾಯಗಳಾಗಿವೆ. ಆದರೆ ಯಾವುದೇ ಯೋಧ ಮೃತಪಟ್ಟಿಲ್ಲ ಮತ್ತು ಗಂಭೀರವಾಗಿ ಗಾಯಗೊಂಡಿಲ್ಲ. ಸಕಾಲಿಕವಾಗಿ ನಮ್ಮ ಸೇನೆಯ ಕಮಾಂಡರ್‍ಗಳು ಮಧ್ಯಪ್ರವೇಶಿಸಿದ್ದರಿಂದ ಅನಿರೀಕ್ಷಿತ ಘಟನೆಯನ್ನು ಪೂರ್ವ ಸಿದ್ದತೆಯೊಂದಿಗೆ ನಿಭಾಯಿಸಲಾಗಿದೆ. ಚೀನಾ ಯೋಧರು ಸದ್ಯಕ್ಕೆ ಅವರ ಜಾಗಕ್ಕೆ ಮರಳಿದ್ದಾರೆ ಎಂದರು.

ತಂದೆಯನ್ನು ಕೊಂದು, 30 ತುಂಡುಗಳನ್ನಾಗಿ ತುಂಡರಿಸಿದ ಪಾಪಿ ಪುತ್ರ

ಆದರೆ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಒಪ್ಪದ ಪ್ರತಿಪಕ್ಷಗಳು ಮತ್ತೂ ಗಲಾಟೆ ಮಾಡಿದವು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯಿತು. ಪ್ರತಿಪಕ್ಷದ ನಾಯಕರು ಸಭಾ ತ್ಯಾಗ ಮಾಡುವ ಮೂಲಕ ತಮ್ಮ ವಿರೋಧ ದಾಖಲಿಸಿದರು.

India China border clash, No major injuries, army, Rajnath Singh,

Articles You Might Like

Share This Article