ಉತ್ತರ ಭಾರತದಲ್ಲಿ ಚಳಿಗೆ ಜನರು ತತ್ತರ, ರಾಜ್ಯದಲ್ಲೂ ಕಡಿಮೆಯಾದ ಚಳಿ

ಬೆಂಗಳೂರು, ಜ.5- ಉತ್ತರ ಭಾರತದಲ್ಲಿ ಕೊರೆಯುವ ಚಳಿಗೆ ಜನರು ತತ್ತರಿಸುವಂತಾಗಿದ್ದರೆ, ರಾಜ್ಯದಲ್ಲಿ ಚಳಿಯ ಪ್ರಮಾಣ ಈ ಬಾರಿ ವಾಡಿಕೆಗಿಂತ ಕಡಿಮೆಯಾಗಿದೆ. ಕಳೆದೆರಡು ತಿಂಗಳಲ್ಲಿ ಚಳಿ ಅಷ್ಟಾಗಿ ಕಂಡುಬರಲಿಲ್ಲ.  ರಾಜ್ಯದಲ್ಲಿ ಬಹಳಷ್ಟು ಕಡೆ ಚಳಿಗಾಲದಲ್ಲಿ ಸೆಕೆಯ ವಾತಾವರಣ ಇನ್ನೂ ದೂರವಾಗಿಲ್ಲ. ಚಳಿಗಾಲದ ಅರ್ಧದಷ್ಟು ಕಾಲ ಕಳೆದರೂ ಚಳಿ ಕಂಡುಬಂದಿಲ್ಲ.

ಉತ್ತರ ಭಾರತದಿಂದ ದಕ್ಷಿಣಾಭಿಮುಖವಾಗಿ ಶೀತಗಾಳಿ ಈ ಬಾರಿ ಬೀಸುತ್ತಿಲ್ಲ. ಹೀಗಾಗಿ ಕನಿಷ್ಟ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲೂ ಚಳಿ ನಿರೀಕ್ಷೆಗಿಂತ ಕಡಿಮೆ ಕಂಡುಬರುತ್ತಿದೆ. ಮುಂದಿನ ವಾರದಲ್ಲಿ ಚಳಿ ವಾಡಿಕೆಯಷ್ಟು ಕಂಡುಬರುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಉತ್ತರ ಭಾರತದಲ್ಲಿ ಕನಿಷ್ಟ ತಾಪಮಾನ ತೀವ್ರವಾಗಿ ಕುಸಿದಿದೆ. ಆ ಭಾಗದಲ್ಲಿ ಚಳಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಬಾರಿ ಉತ್ತರದಿಂದ ದಕ್ಷಿಣದ ಕಡೆಗೆ ಶೀತಗಾಳಿ ಬೀಸುತ್ತಿಲ್ಲ. ಅಲ್ಲದೆ, ಯಾವ ಕಡೆಯಿಂದಲೂ ಗಾಳಿ ಬೀಸುವಿಕೆ ಕಂಡುಬರುತ್ತಿಲ್ಲ. ಇದು ಕೂಡ ಚಳಿಯ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.
ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇದರಿಂದ ಚಳಿಯ ಪ್ರಮಾಣ ಇಳಿಕೆಯಾಗಿದೆ.

ಜ.9ರ ನಂತರ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಆಕಾಶದಲ್ಲಿ ಮೋಡಗಳು ತೆರವಾಗಿ ನಿರ್ಮಲವಾದ ವಾತಾವರಣ ಕಂಡುಬಂದರೆ ಚಳಿ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಗರಿಷ್ಠ ತಾಪಮಾನ ಸರಾಸರಿ 30 ರಿಂದ 32 ಡಿಗ್ರಿ ಸೆಲ್ಷಿಯಸ್‍ನಷ್ಟು , ಕನಿಷ್ಠ ತಾಪಮಾನ 15 ರಿಂದ 18 ಡಿಗ್ರಿ ಸೆಲ್ಷಿಯಸ್‍ನಷ್ಟು ಕಂಡುಬರುತ್ತಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಈ ಬಾರಿ ಇದೇ ರೀತಿಯ ವಾತಾವರಣ ಕಂಡುಬಂದಿದ್ದು, ಕಳೆದೆರಡು ತಿಂಗಳಲ್ಲಿ ಯಾವ ಜಿಲ್ಲೆಯಲ್ಲೂ ತೀವ್ರವಾದ ಚಳಿ ಕಂಡುಬಂದ ವರದಿಯಾಗಿಲ್ಲ.