ತಾಲಿಬಾನಿಗಳ ನರಕ ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಬಂದ ಭಾರತೀಯರು..!
ನವದೆಹಲಿ, ಆ.22- ತಾಲಿಬಾನಿಗಳ ಅತಿಕ್ರಮಣದ ಬಳಿಕ ಅನಿಶ್ಚಿತತೆಗೆ ಸಿಲುಕಿರುವ ಆಫ್ಘಾನಿಸ್ತಾನದಿಂದ 107 ಭಾರತೀಯರು ಸೇರಿದಂತೆ 168 ಮಂದಿಯನ್ನು ವಾಯುಪಡೆ ವಿಮಾನಗಳಲ್ಲಿ ಕರೆತರಲಾಗಿದೆ.ಮತ್ತೊಂದೆಡೆ ಕಾಬೂಲ್ನಿಂದ ಸ್ಥಳಾಂತರಿಸಲಾದ ಇಬ್ಬರು ನೇಪಾಳಿಯರು ಸೇರಿ ಒಟ್ಟು 87 ಮಂದಿಯನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯಿಂದ ಇಂದು ಬೆಳಗ್ಗೆ ಭಾರತದ ನವದೆಹಲಿಗೆ ಕರೆತರಲಾಗಿದೆ.
ಈ ತಂಡವನ್ನು ಶನಿವಾರ ಕಾಬೂಲ್ನಿಂದ ತಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಉಪಚರಿಸಿ ಧೈರ್ಯ ತುಂಬಿ ಸುರಕ್ಷಿತವಾಗಿ ಇಂದು ಬೆಳಗ್ಗೆ 87 ಮಂದಿಯನ್ನು ದೆಹಲಿಗೆ ಕಳುಹಿಸಿಕೊಟ್ಟಿದೆ.ಮುಂದುವರೆದ ಕಾರ್ಯಾಚರಣೆಯಲ್ಲಿ ಮತ್ತೆ 168 ಮಂದಿಯನ್ನು ಕಾಬೂಲ್ನಿಂದ ನೇರವಾಗಿ ಸೇನೆಯ ವಿಮಾನಗಳ ಮೂಲಕ ಹಿಂಡನ್ ವಾಯುನೆಲೆಗೆ ಕರೆತರಲಾಗಿದೆ.
ಅಫ್ಘಾನಿಸ್ತಾನದಿಂದ ಭಾರತೀಯ ಪ್ರಜೆಗಳು ಹಾಗೂ ನಿರಾಶ್ರಿತರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ. ಈ ಮೊದಲು ಎರಡು ವಾಯುಸೇನೆಯ ವಿಮಾನಗಳಿಂದ 200 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಇದರಲ್ಲಿ ಮೊದಲ ಹಂತದಲ್ಲಿ 40, ಎರಡನೇ ಹಂತದಲ್ಲಿ 150 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಹಾಗೂ ನ್ಯಾಟೋ ಪಡೆಗಳ ಸಹಕಾರದಿಂದ ಈವರೆಗೂ ಒಟ್ಟು 400ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ.ಇಂದು ಬೆಳಗಿನ ಕಾರ್ಯಚರಣೆ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಅಕೃತವಾಗಿ ಮಾಹಿತಿ ನೀಡಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ವ್ಯಕ್ತಾರ ಹರೀಂದಮ್ ಬಗಾಚಿ ಅವರು, ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕೆ ಸಹಕರಿಸಿದ ನ್ಯಾಟೋ ಪಡೆಗಳು, ತಜಕೀಸ್ಥಾನದ ರಾಯಭಾರ ಕಚೇರಿ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ.
ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಬಹಳಷ್ಟು ಮಂದಿ ನಿಟ್ಟುಸಿರು ಬಿಟ್ಟಿದ್ದು, ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ಅಲ್ಲಿನ ಭೀಕರತೆಯನ್ನು ವಿವರಿಸಿದ್ದಾರೆ.ಆಫ್ಘಾನಿಸ್ತಾನದಲ್ಲಿ ಸಂಸದರಾಗಿದ್ದ ನರೇಂದ್ರ ಸಿಂಗ್ ಖಲಾಸ ಅವರು, 20 ವರ್ಷಗಳಿಂದ ಕಟ್ಟಿದ್ದನ್ನು ತಾಲಿಬಾನಿಗಳು ಕೆಲವೇ ದಿನಗಳಲ್ಲಿ ನಾಶಪಡಿಸಿದರು ಎಂದು ದುಃಖಿಸಿದ್ದಾರೆ.
ನನಗೆ ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ ಅಳು ಬರುತ್ತಿದೆ. ದೇಶ ನಿರ್ಮಾಣಕ್ಕಾಗಿ ಸುಮಾರು 20 ವರ್ಷ ಕೆಲಸ ಮಾಡಿದ್ದೆವು ಎಂದು ಅವರು ಹೇಳಿಕೊಂಡಿದ್ದಾರೆ.ಅಫ್ಘಾನಿಸ್ಥಾನದಲ್ಲಿನ ಪರಿಸ್ಥಿತಿ ವಿನಾಶಕಾರಿಯಾಗಿದೆ. ನಾನು ಇಲ್ಲಿಗೆ , ನಮ್ಮ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಬಂದಿದ್ದೇನೆ. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಹಾಕಿದಾಗ ಭಾರತೀಯ ಸಹೋದರ, ಸಹೋದರಿಯರು ನನ್ನ ನೆರವಿಗೆ ಬಂದರು ಎಂದು ಆಫ್ಘಾನಿಸ್ತಾನದ ಮಹಿಳೆ ಹೇಳಿಕೊಂಡಿದ್ದಾರೆ.