ನವದೆಹಲಿ,ಫೆ.25- ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಉತ್ತೇಜಿತ ಯೋಜನೆಗಳಿಂದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ 350ಕ್ಕೂ ಹೆಚ್ಚು ಹೊಸ ಕಂಪನಿಗಳು ಪರಾವನಗಿ ಪಡೆದಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಬಜೆಟ್‍ಪೂರ್ವದಲ್ಲಿ ಆಯೋಜಿಸಲಾಗಿರುವ ವೆಬಿನಾರ್‍ನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಭಾರತ್-ಕರೆಯಿಂದ ಕ್ರಮ ಎಂಬ ವಿಷಯ ಕುರಿತು ಮಾತನಾಡಿದ ಅವರು, 2001ರಿಂದ 2014ರವರೆಗೆ 200 ಕಂಪನಿಗಳು ಮಾತ್ರ ಪರಾವನಗಿ ಪಡೆದಿದ್ದವು. ಆದರೆ 2014ರಿಂದ ಈವರಗೆ ಹೊಸದಾಗಿ 350ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ ನಿಪುಣತೆ ಅತಿದೊಡ್ಡ ಶಕ್ತಿ. ಇದನ್ನು ನಾವು ನಮ್ಮ ರಕ್ಷಣಾ ಕ್ಷೇತ್ರದಲ್ಲಿ ಬಳಕೆ ಮಾಡಬೇಕು. ತನ್ಮೂಲಕ ರಾಷ್ಟ್ರೀಯ ಭದ್ರತಾ ಖಾತ್ರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ವಿದೇಶಗಳಿಂದ ಶಸ್ತ್ರಾಸ್ತ್ರಗಳ ಆಮದು ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅವುಗಳನ್ನು ಖರೀದಿಸಿ ತಂದು ಸೇನೆಗೆ ಒದಗಿಸುವ ವೇಳೆಗೆ ಆಧುನಿಕ ಶಸ್ತ್ರಾಸ್ತ್ರಗಳು ಮಾರುಕಟ್ಟೆಯಲ್ಲಿರುತ್ತವೆ. ನಮ್ಮ ಯೋಧರ ಬಳಿ ಹಳೆಯ ಶಸ್ತ್ರಾಸ್ತ್ರಗಳೇ ಉಳಿಯುತ್ತವೆ. ಇದಕ್ಕೆ ಪರಿಹಾರವಾಗಿ ಆತ್ಮ ನಿರ್ಭರ್ ಭಾರತ್ ದೇಶೀಯ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ.
ರಕ್ಷಣಾ ಇಲಾಖೆಯ ಶೇ.70ರಷ್ಟು ಬಜೆಟ್ ಅನುದಾನವನ್ನು ದೇಶೀಯ ಉತ್ಪಾದನೆಗಾಗಿಯೇ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ. 2022-23ನೇ ಸಾಲಿನ ಕೇಂದ್ರದ ಆಯವ್ಯಯ, ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯ ಪೂರಕ ವಾತಾವರಣಕ್ಕೆ ವ್ಯಾಪಕ ಅವಕಾಶಗಳನ್ನು ಸೃಷ್ಟಿಸಿದೆ. ಈವರೆಗೂ 200ಕ್ಕೂ ಹೆಚ್ಚು ಕಂಪನಿಗಳು ಶಸ್ತ್ರಾಸ್ತ್ರಗಳನ್ನು ತಯಾರು ಮಾಡುತ್ತಿವೆ ಎಂದು ಹೇಳಿದರು.
ಹೊಸದಾಗಿ ಪ್ರಕಟಿಸಲಾದ ಯೋಜನೆಗಳಲ್ಲಿ 54 ಸಾವಿರ ಕೋಟಿ ದೇಶೀಯ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸುಮಾರು 4.5 ಲಕ್ಷ ಕೋಟಿ ವೆಚ್ಚದಲ್ಲಿ ವಿವಿಧ ಹಂತಗಳಲ್ಲಿ ಶಸ್ತ್ರಾಸ್ತ್ರಗಳ ಖರೀದಿಗೆ ನಿರ್ಧರಿಸಲಾಗಿದೆ. 3ನೇ ಹಂತದ ಪ್ರಕ್ರಿಯೆಗಳು ಚಾಲನೆಯಲ್ಲಿವೆ ಎಂದರು.
ರಕ್ಷಣೆ ಕ್ಷೇತ್ರದಲ್ಲಿ ತಮ್ಮದೇ ಆದ ವಿನ್ಯಾಸಗಳ ಶಸ್ತ್ರಾಸ್ತ್ರಗಳ ಬಳಕೆ ಪ್ರಮುಖ ರಣತಂತ್ರವಾಗಿರುತ್ತದೆ. ಹತ್ತು ದೇಶಗಳು ಒಂದೇ ಮಾದರಿಯ ರಕ್ಷಣಾ ಸಾಮಗ್ರಿಗಳನ್ನು ತಯಾರಿಸುತ್ತವೆ. ಅವುಗಳನ್ನೇ ಬಹುತೇಕ ರಾಷ್ಟ್ರಗಳು ಬಳಕೆ ಮಾಡುತ್ತವೆ. ನಮ್ಮತನದಲ್ಲಿ ವಿಶಿಷ್ಟತೆ ಹಾಗೂ ಅಚ್ಚರಿಯ ಅಂಶಗಳ ಸಾಧ್ಯತೆಗಳು ಇಲ್ಲದೇ ಇದ್ದರೆ ಪ್ರಯೋಜಕಾರಿಯಲ್ಲ. ಅದಕ್ಕಾಗಿ ದೇಶೀಯ ಮತ್ತು ಸ್ಥಳೀಯ ಸಂಶೋಧನೆಗಳ ಮೂಲಕ ಭಿನ್ನವಾದ ಶಸ್ತ್ರಾಸ್ತ್ರಗಳ ಉತ್ಪಾದನೆ ಅಗತ್ಯ ಎಂದು ಪ್ರಧಾನಿ ಹೇಳಿದ್ದಾರೆ.
ಬ್ರಿಟಿಷರ ಆಡಳಿತ ಮತ್ತು ಸ್ವಾತಂತ್ರ್ಯ ನಂತರದಿಂದಲೂ ಯುದ್ಧ ಸಾಮಾಗ್ರಿಗಳ ತಯಾರಿಕೆಯಲ್ಲಿ ನಮ್ಮ ಸಾಮಥ್ರ್ಯ ಉನ್ನತಮಟ್ಟದಲ್ಲಿತ್ತು. 2ನೇ ವಿಶ್ವ ಯುದ್ಧದಲ್ಲಿ ಭಾರತದ ಶಸ್ತ್ರಾಸ್ತ್ರಗಳು ಮಹತ್ವದ ಪಾತ್ರ ವಹಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಾಮಥ್ರ್ಯವನ್ನು ಕುಂದಿಸಲಾಗಿತ್ತು. ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ದೇಶೀಯ ಪ್ರಾಬಲ್ಯ ಹಿನ್ನಡೆ ಅನುಭವಿಸಲು ಅವಕಾಶ ನೀಡಿಲ್ಲ. ಆತ್ಮ ನಿರ್ಭರ್ ಭಾರತ್ ಮೂಲಕ ಸ್ಥಳೀಯ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.
