ಜಗತ್ತು ಭಾರತದತ್ತ ನೋಡುತ್ತಿದೆ, ದೇಶದ ಜನ ಬಿಜೆಪಿಯತ್ತ ಒಲವು ಹೊಂದಿದ್ದಾರೆ : ಮೋದಿ

Spread the love

ಜೈಪುರ, ಮೇ 20- ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಎಂಟು ವರ್ಷಗಳ ಅವಯನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಸ್ತಾನ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಜೈಪುರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ವಿಡಿಯೋ ಕಾನರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ಯಾವುದೇ ಬಡವರು, ಅರ್ಹ ಫಲಾನುಭವಿಗಳು ಸರ್ಕಾರದ ಕಲ್ಯಾಣ ಕ್ರಮಗಳಿಂದ ಹೊರಗುಳಿಯದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ಎನ್‍ಡಿಎ ಸರ್ಕಾರ ಈ ತಿಂಗಳಲ್ಲಿ ಎಂಟನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2014ರಿಂದೀಚೆಗೆ ಈ ಅವಧಿಯಲ್ಲಿನ ಸರ್ಕಾರದ ಸಾಧನೆಗಳು ಸಂಕಲ್ಪಗಳಿಂದ ಕೂಡಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿವೆ. ಸಣ್ಣ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಈಡೇರಿಸಲಾಗಿದೆ ಎಂದು ಮೋದಿ ಹೇಳಿದರು.

ತಾಯಂದಿರು, ಹೆಣ್ಣು ಮಕ್ಕಳು ಮತ್ತು ಸಹೋದರಿಯರ ಸಬಲೀಕರಣಕ್ಕೆ ಮೀಸಲಾಗಿವೆ. ಸರ್ಕಾರದ ವ್ಯವಸ್ಥೆಗಳು ಮತ್ತು ಅದರ ವಿತರಣಾ ಕಾರ್ಯ ವಿಧಾನದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಿದೆ. ಜಗತ್ತು ಇಂದು ಭಾರತದತ್ತ ಹೆಚ್ಚಿನ ನಿರೀಕ್ಷೆಯಿಂದ ನೋಡುತ್ತಿದೆ. ಅದೇ ರೀತಿ ಭಾರತದಲ್ಲಿಯೂ ಬಿಜೆಪಿ ಬಗ್ಗೆ ಜನರು ವಿಶೇಷ ಒಲವು ಹೊಂದಿದ್ದಾರೆ. ದೇಶದ ಜನತೆ ಬಿಜೆಪಿ ಮೇಲೆ ಅಪಾರ ನಂಬಿಕೆ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ.

2014 ರ ಮೊದಲಿನ ಹತಾಶೆಯಿಂದ ಜನರನ್ನು ಬಿಜೆಪಿ ಹೊರತಂದಿದೆ. ಇಂದು ಜನರಲ್ಲಿ ಆಕಾಂಕ್ಷೆಗಳು ತುಂಬಿವೆ. ಜನರ ಭರವಸೆಗಳು ಮತ್ತು ಆಕಾಂಕ್ಷೆಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದಿದ್ದಾರೆ. ಮುಂದಿನ 25 ವರ್ಷಗಳಲ್ಲಿ ದೇಶ ಸ್ವಾತಂತ್ರೋತ್ಸವದ ಶತಮಾನೋತ್ಸವ ಆಚರಿಸಲಿದೆ.

ಆ ವೇಳೆಗೆ ದೇಶದ ಅಭಿವೃದ್ಧಿಯ ಗುರಿಯನ್ನು ರೂಪಿಸಲಾಗಿದೆ. ಅವುಗಳ ಈಡೇರಿಕೆಗೆ ಬಿಜೆಪಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದ ಅವರು, ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ವಿಷಮಯ ವಾತಾವರಣ ನಿರ್ಮಿಸಲು ಮತ್ತು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಸಣ್ಣ ಘಟನೆಗಳನ್ನು ಹುಡುಕುತ್ತಲೇ ಇರುತ್ತವೆ ಎಂದು ವಿರೋಧ ಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಸಣ್ಣ ಘಟನೆಗಳನ್ನು ದೊಡ್ಡದು ಮಾಡಿ, ದೇಶದ ಅಭಿವೃದ್ಧಿ ವಿಚಾರಗಳನ್ನು ಮರೆ ಮಾಚಲು ಪ್ರಯತ್ನಿಸಲಾಗುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರು ಬೇರೆಡೆಗೆ ಗಮನ ಹರಿಸದೇ ಅಭಿವೃದ್ಧಿ ವಿಷಯವಾಗಿ ಆಸಕ್ತಿ ಹೊಂದಿರಬೇಕು ಎಂದು ಕರೆ ನೀಡಿದರು.

Facebook Comments