ನವದೆಹಲಿ, ಜ.4- ಕಳೆದ ವಾರದಿಂದಲೂ ಏರಿಕೆ ಗತಿಯಲ್ಲಿರುವ ಕೊರೊನಾ ಸೋಂಕಿನ ಇಂದು ಹೊಸದಾಗಿ 37,379 ಪ್ರಕರಣಗಳು ಪತ್ತೆಯಾಗಿದ್ದು, 124 ಮಂದಿ ಜೀವ ಹಾನಿಯಾಗಿದೆ. ಓಮಿಕ್ರಾನ್ ರೂಪಾಂತರಿ ಸೋಂಕು 1892 ಮಂದಿಯಲ್ಲಿ ಕಾಣಿಸಿಕೊಂಡಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ 1,70,830 ಸಕ್ರಿಯ ಪ್ರಕರಣಗಳಿವೆ. ಆದಾಗ್ಯೂ ಇವುಗಳ ಸಂಖ್ಯೆ ಒಟ್ಟು ಸೋಂಕಿನಲ್ಲಿ ಶೇ.1ರ ಒಳಗೆ ದಾಖಲಾಗಿದೆ, ನಿನ್ನೆಯ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.49ರಷ್ಟು ಎಂದು ತಿಳಿಸಲಾಗಿದೆ.
ಜೊತೆಯಲ್ಲಿ 11,007 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಚೇತರಿಕೆ ಪ್ರಮಾಣ ಶೇ.98.13ರಷ್ಟಾಗಿದ್ದು, ಈವರೆಗೂ 3,43,06,414 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸದಾಗಿ ಪತ್ತೆಯಾದ ಸೋಂಕಿನ ಪ್ರಕಣಗಳ ಪ್ರಮಾಣ ಶೇ.3.24ರಷ್ಟಾಗಿದೆ. ವಾರದ ಸರಾಸರಿ ಶೇ.2.05ರಷ್ಟಿದೆ. ದಿನದ ಸೋಂಕು ಹೆಚ್ಚಾಗುತ್ತಿದ್ದು ಶೇ.5ರ ಗಡಿ ದಾಟುವುದು ಅಪಾಯದ ಮುನ್ಸೂಚನೆಯಾಗಿದೆ. ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾಗಿ ಅನಗತ್ಯವಾದ ಆತಂಕಗಳು ಮನೆ ಮಾಡುತ್ತವೆ.
ಈ ನಡುವೆ ರೂಪಾಂತರಿ ಓಮಿಕ್ರಾನ್ ಕೂಡ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ 568, ದೆಹಲಿಯಲ್ಲಿ 382, ಕೇರಳದಲ್ಲಿ 185, ರಾಜಸ್ತಾನದಲ್ಲಿ 174, ಗುಜರಾತ್‍ನಲ್ಲಿ 152, ತಮಿಳುನಾಡಿನಲ್ಲಿ 121, ತೆಲಂಗಾಣದಲ್ಲಿ 67, ಕರ್ನಾಟಕಟದಲ್ಲಿ 64, ಹರ್ಯಾಣದಲ್ಲಿ 63, ಒಡಿಸಾದಲ್ಲಿ 37, ಪಶ್ಚಿಮ ಬಂಗಾಳದಲ್ಲಿ 20, ಆಂಧ್ರ ಪ್ರದೇಶ, ಉತ್ತರಾಖಾಂಡ್‍ನಲ್ಲಿ ತಲಾ 8, ಗೋವಾದಲ್ಲಿ 5, ಚಂಡಿಗಡ್, ಜಮ್ಮುಕಾಶ್ಮೀರದಲ್ಲಿ ತಲಾ ಮೂರು,
ಅಂಡೋಮಾನ್ ನಿಕೋಬಾರ್ ದ್ವೀಪದಲ್ಲಿ ಎರಡು, ಹಿಮಾಚಲ ಪ್ರದೇಶ, ಮಣಿಪುರ, ಲಡಾಕ್, ಪಂಜಾಬ್‍ನಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈವರೆಗೂ 766 ಮಂದಿ ಓಮಿಕ್ರಾನ್ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
