ಮೆಲ್ಬೋರ್ನ್, ಫೆ. 8- ಚುಟುಕು ವಿಶ್ವಕಪ್‍ನ ಸಮರ ನಡೆಯಲು ಇನ್ನು ಬಹಳಷ್ಟು ಸಮಯ ಬಾಕಿ ಇರುವಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಚುಟುಕು ಸಮರದ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟುಕೊಂಡಿದೆ. ಈ ನಡುವೆ ಈ ಪಂದ್ಯ ವೀಕ್ಷಣೆಯ ಟಿಕೆಟ್‍ಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾರಾಟ ಮಾಡಿದೆ.
ಅಕ್ಟೋಬರ್ 23 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ನಡೆಯುವ ಚುಟುಕು ವಿಶ್ವಕಪ್‍ನ ಟ್ವೆಂಟಿ-20 ಪಂದ್ಯವನ್ನು ಮೈದಾನದಲ್ಲಿ ಖುದ್ದಾಗಿ ವೀಕ್ಷಿಸಲು ಪ್ರೇಕ್ಷಕರು ಮುಗಿಬಿದ್ದಿದ್ದು, ಕೇವಲ 5 ನಿಮಿಷದಲ್ಲಿ 2 ಲಕ್ಷ ಟಿಕೆಟ್‍ಗಳನ್ನು ಕೊಂಡುಕೊಂಡಿದ್ದಾರೆ.
ಪುರುಷರ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಗಳು ಅಕ್ಟೋಬರ್ 16 ರಿಂದ 23ರವರೆಗೂ ನಡೆಯಲಿದ್ದು ಸೆಮಿಫೈನಲ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 45 ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ.
ಉಳಿದೆಲ್ಲ ಪಂದ್ಯಗಳಿಗಿಂತಲೂ ಅಕ್ಟೋಬರ್ 23 ರಂದು ಮೆಲ್ಬೋರ್ನ್‍ನ ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೇ ಅತಿ ರೋಚಕತೆಯನ್ನು ಮೂಡಿಸಿದ್ದು ಈ ಪಂದ್ಯವನ್ನು ವೀಕ್ಷಿಸಲು 8 ಲಕ್ಷ ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.
ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್‍ನ ಸ್ಥಳೀಯ ಆಯೋಜಕ ಕಮಿಟಿಯ ಸಿಇಒ ಮೈಕೆಲ್ ಎನ್‍ರೇಟ್ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವಕಪ್‍ನ ಟಿಕೆಟ್ ಪಡೆಯಲು ಪ್ರೇಕ್ಷಕರು ಉತ್ಸಾಹವನ್ನು ತೋರಿಸುತ್ತಿರುವ ರೀತಿಯು ನಮ್ಮ ಸಂತೋಷವನ್ನು ಹೆಚ್ಚಿಸುತ್ತಿದೆ, ವಿಶ್ವಕಪ್ ನಡೆಯಲು ಇನ್ನೂ 9 ತಿಂಗಳು ಇದ್ದು ಈಗಲೇ ಟಿಕೆಟ್ ಪಡೆದುಕೊಂಡಿರುವ ಅಭಿಮಾನಿಗಳಿಗೆ ಹೆಚ್ಚಿನ ಪ್ರಾಶಸ್ತ್ರ್ಯ ನೀಡಲಿದ್ದು ಒಂದು ವೇಳೆ ಅವರು ಟಿಕೆಟ್‍ಗಳನ್ನು ಮಾರಾಟ ಮಾಡಲು ಬಯಸಿದರೆ ಅವರಿಗೆ ಪ್ರಾಮುಖ್ಯತೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
2020ರಲ್ಲೇ ಆಸ್ಟ್ರೇಲಿಯಾದಲ್ಲಿ ಚುಟುಕು ವಿಶ್ವಕಪ್ ಸಮರವನ್ನು ನಡೆಸಬೇಕಾಗಿತ್ತಾದರೂ ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಲಿರಲಿಲ್ಲ, ಆದರೆ ಈಗ ವಿಶ್ವಕಪ್ ನಡೆಸಲು ಸಕಾಲವಾಗಿದ್ದು ಪ್ರೇಕ್ಷಕರು ಕೂಡ ಮೈದಾನದಲ್ಲಿ ಕುಳಿತು ಪಂದ್ಯಗಳನ್ನು ಆನಂದಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
