ನವದೆಹಲಿ, ಜ.12- ದೇಶದಲ್ಲಿ ಏರುತ್ತಲೇ ಇರುವ ಕೊರೊನಾ ಸೋಂಕಿನ ಸಂಖ್ಯೆ 2 ಲಕ್ಷ ಸನಿಹದತ್ತ ಸಾಗಿದ್ದು, ಓಮಿಕ್ರಾನ್ ಪೀಡಿತರ ಸಂಖ್ಯೆ 4868ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,94,720 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 442 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಶೇ.11.05ರಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ.ಒಂದೇ ದಿನದಲ್ಲಿ 60,405 ಮಂದಿ ಸೋಂಕಿನಿಂದ ಗುಣಮುಖರಾಗಿರುವುದು ಕೊಂಚ ಸಮಾಧಾನದ ವಿಷಯವಾಗಿದೆ.
ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 9,55,319ಕ್ಕೆ ಏರಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಸೋಂಕಿತರ ಪ್ರಮಾಣ ಶೇ.15.8ರಷ್ಟು ಹೆಚ್ಚಾಗಿದೆ. ನಿನ್ನೆ ದೇಶದಲ್ಲಿ 1,68,063 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈವರೆಗೆ ಕೊರೊನಾ ಸೋಂಕಿನಿಂದ ದೇಶಾದ್ಯಂತ 4,84,605 ಮಂದಿ ಮೃತಪಟ್ಟಿದ್ದಾರೆ. 3,46,30,536 ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಮುಂದುವರೆಯುತ್ತಿದೆ. ವೈದ್ಯರಲ್ಲಿ ಸೋಂಕು ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು, ಈವರೆಗೆ 481 ರೆಸಿಡೆಂಟ್ ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಮಹಾರಾಷ್ಟ್ರದ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಸಂಘದ ಅಧ್ಯಕ್ಷ ಡಾ.ಅವಿನಾಶ್ ದಹಿಫಲೆ ಮಾಹಿತಿ ನೀಡಿದ್ದಾರೆ.
