ದೇಶದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ನವದೆಹಲಿ, ಮೇ 21- ಕಳೆದ ವಾರದಿಂದ ಕ್ಷೀಣ ಸ್ಥಿತಿಯಲ್ಲಿದ್ದ ಕೊರೊನಾ ಸೋಂಕು ಇಂದು ಇದ್ದಕ್ಕಿದ್ದರಂತೆ ಎರಡು ಸಾವಿರದಷ್ಟು ಗಡಿ ದಾಟಿದ್ದು, 25 ಮಂದಿ ಮೃತಪಟ್ಟಿದ್ದಾರೆ. ಸೋಂಕು ಕ್ಷೀಣಿಸಿದ ಪ್ರಮಾಣದಿಂದ ನಾಲ್ಕನೆ ಅಲೆಯ ಭೀತಿ ಮರೆಯಾಗಿದೆ ಎಂದು ನಿಟ್ಟುಸಿರು ಬಿಡುವ ನಡುವೆಯೇ ಇಂದು ದೈನಂದಿನ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2,323 ಹೊಸ ಸೋಂಕುಗಳು ಪತ್ತೆಯಾಗಿವೆ.

ಈ ಮೂಲಕ ಒಟ್ಟು ಸೋಂಕಿನ ಪ್ರಮಾಣ 4,31,34,145 ಕ್ಕೆ ಏರಿಕೆಯಾಗಿದೆ. ಸಮಾಧಾನಕರ ಅಂಶವೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ14,996 ಕ್ಕೆ ಕುಸಿದಿದೆ. ಒಟ್ಟು ಸೋಂಕುಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03ರಷ್ಟಿದೆ. ಚೇತರಿಕೆ ದರ ಶೇ. 98.75 ರಷ್ಟಿದೆ.

24 ಗಂಟೆಗಳ ಅವಧಿಯಲ್ಲಿ 48 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ದೈನಂದಿನ ಧನಾತ್ಮಕತೆಯ ದರ ಶೇ.0.47, ಸಾಪ್ತಾಹಿಕ ಧನಾತ್ಮಕ ದರವು ಶೇ.0.51ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,25,94,801 ಕ್ಕೆ ಏರಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.22 ರಷ್ಟಿದೆ, ನಿನ್ನೆ 25 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,348 ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.