ದೇಶದಲ್ಲಿ ಶೇ.1ರ ಗಡಿ ದಾಟಿದ ಕೋವಿಡ್ ಪಾಸಿಟಿವಿಟಿ ಪ್ರಮಾಣ
ನವದೆಹಲಿ, ಮೇ 2- ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ 3,157ರಷ್ಟಿದ್ದು, 26 ಸಾವುಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಪ್ರಮಾಣ 19,500ಕ್ಕೇರಿಕೆಯಾಗಿದೆ. ಈ ಮೂಲಕ ಪಾಸಿಟಿವಿಟಿ ಪ್ರಮಾಣ ಶೇ.1ನ್ನು ದಾಟಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳು 4,30,82,345ರಷ್ಟಾಗಿವೆ. ಸಾವಿನ ಸಂಖ್ಯೆ 5,23,869ಕ್ಕೆ ಏರಿಕೆಯಾಗಿದೆ, ಶೇ.1.22ರಷ್ಟಿದೆ ಎಂದು ಮಾಹಿತಿ ನೀಡಲಾಗಿದೆ.
24 ಗಂಟೆಗಳ ಅವಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 408 ಹೆಚ್ಚಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19,500 ಕ್ಕೆ ತಲುಪಿದೆ. ಎರಡು ತಿಂಗಳ ಬಳಿಕ ದೈನಂದಿನ ಸೋಂಕಿನ ಪ್ರಮಾಣ ಶೇ.1ನ್ನು ಮೀರಿದ್ದು, ಶೇ.1.07ಕ್ಕೆ ಹೆಚ್ಚಳವಾಗಿದೆ. ಕಳೆದ ಫೆಬ್ರವರಿ 27 ರಂದು ದಿನದ ಸೋಂಕಿನ ಪ್ರಮಾಣ ಶೇ.1.11 ರಷ್ಟು ಇತ್ತು ಎಂದು ವರದಿಯಾಗಿದೆ. ವಾರದ ಸೋಂಕಿನ ಪ್ರಮಾಣ ಶೇ.0.70ರಷ್ಟಾಗಿದೆ ಎಂದು ತಿಳಿಸಲಾಗಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 0.05 ರಷ್ಟಿದೆ. ಸಮಾಧಾನಕರ ಅಂಶವೆಂದರೆ ದೇಶದ ಕೋವಿಡ್ ಚೇತರಿಕೆ ದರ ಶೇ.98.74ರಷ್ಟು. ಚಿಕಿತ್ಸೆ ಪಡೆದು 4,25,38,976 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದಡಿ ಇದುವರೆಗೆ 189.23 ಕೋಟಿ ಡೋಸ್ಗಳನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ.