ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಚೀನಾ ಪ್ರಜೆಗಳ ಭಾರತ ಪ್ರವೇಶ ನಿಷೇಧ
ನವದೆಹಲಿ, ಏ.24- ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತವು ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆ (ಐಎಟಿಎ) ತಿಳಿಸಿದೆ. ಇಂಟನ್ರ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (ಐಎಟಿಎ) ಏಪ್ರಿಲ್ 20ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಚೀನಾ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಭೂತಾನ್, ಮಾಲ್ಡೀವ್ಸ್, ನೇಪಾಳದ ಪ್ರಜೆಗಳು ಭಾರತ ನೀಡಿದ ನಿವಾಸ ಪರವಾನಿಗೆ ಹೊಂದಿರುವ ಪ್ರಯಾಣಿಕರು, ಭಾರತದಿಂದ ನೀಡಿದ ವೀಸಾ ಅಥವಾ ಇ-ವೀಸಾ ಹೊಂದಿರುವ ಪ್ರಯಾಣಿಕರು, ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ ಅಥವಾ ಬುಕ್ಲೆಟ್ ಹೊಂದಿರುವ ಪ್ರಯಾಣಿಕರು, ಭಾರತೀಯ ಮೂಲದ ವ್ಯಕ್ತಿಗಳು ಎಂಬ ಕಾರ್ಡ್ ಹೊಂದಿರುವ ಪ್ರಯಾಣಿಕರು ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಪ್ರಯಾಣಿಕರು ಭಾರತವನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಚೀನಾ ಪ್ರಜೆಗಳಿಗೆ ನೀಡಲಾಗಿದ್ದ 10 ವರ್ಷಗಳ ಮಾನ್ಯತೆ ಹೊಂದಿದ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ತಿಳಿಸಲಾಗಿದೆ. ಐಎಟಿಎ ಜಾಗತಿಕ ವಿಮಾನಯಾನ ಸಂಸ್ಥೆಯಾಗಿದ್ದು, ಸುಮಾರು 290 ಸದಸ್ಯರನ್ನು ಹೊಂದಿದೆ. ಜಾಗತಿಕ ವಾಯು ಸಂಚಾರದ ಶೇ.80ರಷ್ಟು ಪಾಲು ಹೊಂದಿದೆ.
ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಸರಿಸುಮಾರು 22ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಮರಳಿ ಚೀನಾಕ್ಕೆ ಹೋಗಿ ದೈಹಿಕ ತರಗತಿಗಳಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಭಾರತ ಆಗ್ರಹಿಸಿದೆ. ಆದರೆ ಚೀನಾ ಈವರೆಗೆ ಇದಕ್ಕೆ ಸ್ಪಂದಿಸಿಲ್ಲ.
ಕೋವಿಡ್ ಸೋಂಕು ಹೆಚ್ಚಾದ 2020 ರಲ್ಲಿ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಅಧ್ಯಯನವನ್ನು ಮೊಟಕುಗೊಳಿಸಿ ಭಾರತಕ್ಕೆ ಬಂದಿದ್ದರು. ಕಟ್ಟುನಿಟ್ಟಾದ ನಿರ್ಬಂಧಗಳ ಮುಂದುವರಿಕೆಯು ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ. ಈ ವಿಷಯದಲ್ಲಿ ಸೌಹಾರ್ದಯುತ ನಿಲುವು ಅಳವಡಿಸಿಕೊಳ್ಳುವಂತೆ ಭಾರತ ಒತ್ತಾಯಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಮಾರ್ಚ್ 17 ರಂದು ಹೇಳಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದುಶಾನ್ಬೆಯಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.